ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ತೀವ್ರ ಹೋರಾಟ ಅಗತ್ಯ: ಬಯ್ಯಾರೆಡ್ಡಿ
ಬೆಂಗಳೂರು, ಜು.21: ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ-2020, ಮತ್ತಿತರೆ ತಿದ್ದುಪಡಿ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಯ್ಯಾರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಜನತೆ ಕೋವಿಡ್-19ರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸುವ ಬದಲು ಗ್ರಾಮೀಣ ಜನತೆಯ ಮೇಲೆ ಕಾರ್ಪೊರೇಟ್ ಕಂಪನಿಗಳು ದಬ್ಬಾಳಿಕೆ ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರಲ್ಲಿದ್ದ ರೈತಪರ ಆಶಯಗಳಿಗೆ ವಿರುದ್ದವಾಗಿ ತಿದ್ದುಪಡಿ ಮಾಡಿದೆ.
ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ-2020 ಕಾಯ್ದೆಯಿಂದ ಸಾಲಕ್ಕೆ ಸಿಲುಕಿದ ರೈತರಿಂದ ಭೂಮಾಲಕ ಬಂಡವಾಳದಾರರು ಮತ್ತು ಕಾರ್ಪೋರೇಟ್ ಕಂಪನಿಗಳು ಲಪಟಾಯಿಸಿ ಸಾವಿರಾರು ಎಕರೆ ಜಮೀನುಗಳನ್ನು ವಶಪಡಿಸಿಕೊಳ್ಳಲು ನೆರವಾಗಲಿವೆ. ಅದೇ ರೀತಿ ಲಕ್ಷಾಂತರ ಎಕರೆ ಬೇಸಾಯವನ್ನು ಅವರದೇ ಕಂಪನಿಗಳು ನಡೆಸಲು ಅನುವು ಮಾಡಿಕೊಡಲಿವೆ. ಇದರಿಂದ ರೈತ ಸಮುದಾಯ ತಮ್ಮ ಜಮೀನುಗಳನ್ನು ಮಾರಿಕೊಂಡು ಕಾರ್ಪೊರೇಟ್ ಕಂಪೆನಿಗಳಲ್ಲಿ ಜೀತದಾಳುಗಳಾಗಬೇಕಾದ ಪರಿಸ್ಥಿತಿ ಎದುರಿಸಲಿದ್ದಾರೆ.
ಗ್ರಾಮೀಣ ಭಾಗದ ಜನತೆ ಸ್ವಾಭಿಮಾನ, ಸ್ವಾವಲಂಬಿಗಳಾಗಿ ಜೀವನ ನಡೆಸಬೇಕಾದರೆ ರಾಜ್ಯ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020ನ್ನು ವಾಪಸ್ ಪಡೆಯುವವರಿಗೆ ನಿರಂತರವಾಗಿ ಹೋರಾಟ ನಡೆಸಬೇಕಾಗಿದೆ ಎಂದು ಪತ್ರಿಕಾ ಪ್ರಕಟನೆಯ ಮೂಲಕ ಜನತೆಗೆ ಕರೆ ನೀಡಿದ್ದಾರೆ.







