ಅಮೆರಿಕ: ‘ಸ್ಟ್ರೈಕ್ ಫಾರ್ ಬ್ಲ್ಯಾಕ್ ಲೈವ್ಸ್’ನಲ್ಲಿ ಪಾಲ್ಗೊಂಡ ಸಾವಿರಾರು ಉದ್ಯೋಗಿಗಳು
ವಾಶಿಂಗ್ಟನ್, ಜು. 21: ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಚಳವಳಿ ಮತ್ತು ಜನಾಂಗೀಯ ತಾರತಮ್ಯ ಅನುಭವಿಸುತ್ತಿರುವ ಇತರ ಅಲ್ಪಸಂಖ್ಯಾತ ಗುಂಪುಗಳಿಗೆ ಬೆಂಬಲ ಸೂಚಿಸುವುದಕ್ಕಾಗಿ ಸೋಮವಾರ ಅಮೆರಿಕದಾದ್ಯಂತ ಸಾವಿರಾರು ಉದ್ಯೋಗಿಗಳು ತಮ್ಮ ಕೆಲಸದ ಸ್ಥಳಗಳನ್ನು ಬಹಿಷ್ಕರಿಸಿ ಹೊರನಡೆದರು.
‘ವ್ಯವಸ್ಥೆಯಲ್ಲಿರುವ ಜನಾಂಗೀಯ ತಾರತಮ್ಯ’ವನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿ ನಡೆಸಲಾದ ‘ಸ್ಟ್ರೈಕ್ ಫಾರ್ ಬ್ಲ್ಯಾಕ್ ಲೈವ್ಸ್’ ಪ್ರತಿಭಟನೆಯಲ್ಲಿ ವಿವಿಧ ಉದ್ದಿಮೆಗಳ ಉದ್ಯೋಗಿಗಳು ತಮ್ಮ ಕೆಲಸ ಬಹಿಷ್ಕರಿಸಿ ಹೊರನಡೆದು ಪಾಲ್ಗೊಂಡರು.
ದೇಶಾದ್ಯಂತದ 200ಕ್ಕೂ ಅಧಿಕ ನಗರಗಳಲ್ಲಿ ಲಕ್ಷಾಂತರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡರು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ನ್ಯೂಯಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನರ್ಸ್‌ಗಳು, ಕಾವಲುಗಾರರು ಮತ್ತು ಸ್ವಚ್ಛತಾ ಕೆಲಸಗಾರರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡರು. ಕೊರೋನ ವೈರಸ್ ಸಾಂಕ್ರಾಮಿಕದ ಕಾಲದಲ್ಲಿ ಅವರ ಸೇವೆಯು ಅತ್ಯಂತ ಅಗತ್ಯವೆಂದು ಪರಿಗಣಿಸಲಾಗಿದೆ. ತಮ್ಮ ಕೆಲಸವು ತಮ್ಮನ್ನು ಅಪಾಯಕ್ಕೆ ಒಡ್ಡುತ್ತಿದ್ದರೂ ಲೆಕ್ಕಿಸದೆ ಅವರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.







