ಬೆಂಗಳೂರು: ಮತ್ತೆ 2,050 ಮಂದಿಗೆ ಕೊರೋನ ಸೋಂಕು ದೃಢ, 15 ಮಂದಿ ಸಾವು
![ಬೆಂಗಳೂರು: ಮತ್ತೆ 2,050 ಮಂದಿಗೆ ಕೊರೋನ ಸೋಂಕು ದೃಢ, 15 ಮಂದಿ ಸಾವು ಬೆಂಗಳೂರು: ಮತ್ತೆ 2,050 ಮಂದಿಗೆ ಕೊರೋನ ಸೋಂಕು ದೃಢ, 15 ಮಂದಿ ಸಾವು](https://www.varthabharati.in/sites/default/files/images/articles/2020/07/22/252075-1595435039.jpg)
ಬೆಂಗಳೂರು, ಜು.21: ನಗರದಲ್ಲಿ ಬುಧವಾರ ಒಂದೇ ದಿನ 2050 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಸೋಂಕಿಗೆ 15 ಮಂದಿ ಮೃತರಾಗಿದ್ದಾರೆ.
ನಗರದಲ್ಲಿ ಒಟ್ಟು 36,993 ಸೋಂಕಿತರು ಧೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 735 ಜನರು ಸೋಂಕಿಗೆ ಬಲಿಯಾಗಿದ್ದಾರೆ. 8,288 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 27,969 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 34,706 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಬಿಬಿಎಂಪಿ ಸಿಬ್ಬಂದಿಯೂ ಪರದಾಟ: ಬಿಬಿಎಂಪಿ ವರ್ಕ್ ಇನ್ಸ್ ಪೆಕ್ಟರ್ ಗೆ ಕೊರೋನ ಪಾಸಿಟಿವ್ ಬಂದಿದ್ದರೂ ಕೂಡ ಬಿಬಿಎಂಪಿಯು ಆಂಬುಲೆನ್ಸ್ ನೀಡದೆ ಇರುವುದರಿಂದ ಅವರೇ ಹೋಗಿ ಕೆಂಗೇರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಮಕ್ಕಳಿರುವ ಕಾರಣ ಮನೆಗೆ ಹೋಗಲಿಕ್ಕಾಗದ ಪರಿಸ್ಧಿತಿ ಇದ್ದು, ಮೂರು ನಾಲ್ಕು ಆಸ್ಪತ್ರೆಗಳಿಗೆ ಅಲೆದು ಎಲ್ಲಿಯೂ ಹಾಸಿಗೆ ದೊರಕದ ಕಾರಣ, ನಂತರ ತಾವೇ 20,000 ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಅವರೇ ಸೆಲ್ಪಿ ವೀಡಿಯೋ ಮಾಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಗರದ ಎಲ್ಲೆಲ್ಲಿ ಹಾಸಿಗೆ ವ್ಯವಸ್ಥೆ
ನಗರದ 19 ಸರಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ತುರ್ತು ನಿಗಾ ಘಟಕದಲ್ಲಿ (ಐಸಿಯು) 64, ವೆಂಟಿಲೇಟರ್ ಸಹಿತ ಐಸಿಯುಗಳಲ್ಲಿ 99 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. 301 ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಕೋಟಾದಡಿ ರೋಗಿಗಳ ಚಿಕಿತ್ಸೆಗೆ ಒಟ್ಟಾರೆ 7,546 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಈ ಪೈಕಿ ಐಸಿಯುಗಳಲ್ಲಿ 424 ಬೆಡ್ಗಳನ್ನು ಮೀಸಲಿಟ್ಟಿದ್ದು, 87 ಭರ್ತಿಯಾಗಿವೆ. ಇನ್ನು 337 ಖಾಲಿ ಇವೆ.
ವೆಂಟಿಲೇಟರ್ ಸಹಿತ ಐಸಿಯುಗಳಲ್ಲಿ 327 ಹಾಸಿಗೆಗಳಿದ್ದು, 242 ಖಾಲಿ ಉಳಿದಿವೆ. ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಕೋಟಾದಡಿ ಸಾಮಾನ್ಯ ವಾರ್ಡ್ ಗಳಲ್ಲಿ 5559, ಎಚ್ಡಿಯು ವಾರ್ಡ್ ಗಳಲ್ಲಿ 1236, ಐಸಿಯು 424, ವೆಂಟಿಲೇಟರ್ ಸಹಿತ ಐಸಿಯುನಲ್ಲಿ 327 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಈವರೆಗೆ 2664 ಹಾಸಿಗೆಗಳಷ್ಟೇ ಭರ್ತಿಯಾಗಿದ್ದು, ಇನ್ನು 4882 ಹಾಸಿಗೆಗಳು ಲಭ್ಯ ಇವೆ. ಇದಲ್ಲದೇ ಐಸಿಯು, ವೆಂಟಿಲೇಟರ್ ಸೌಲಭ್ಯದ ಹಾಸಿಗೆಗಳು ಸಾಕಷ್ಟಿವೆ. ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಸರಕಾರಿ ಕೋಟಾ ಹೊರತುಪಡಿಸಿ 305 ಖಾಸಗಿ ಆಸ್ಪತ್ರೆಗಳಲ್ಲಿ 16257 ಹಾಸಿಗೆಗಳಿವೆ. ಇದರಲ್ಲಿ ಐಸಿಯು ಮತ್ತು ವೆಂಟಿಲೇಟರ್ ಸಹಿತ ಐಸಿಯು ವಾರ್ಡ್ ಗಳಲ್ಲಿನ ಹಾಸಿಗೆಗಳ ಸಂಖ್ಯೆಯೇ 2099 ರಷ್ಟಿದೆ.