ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ: ಮಾರ್ಗಸೂಚಿ ಬಿಡುಗಡೆಗೆ ಸರಕಾರಕ್ಕೆ ಸಿ.ಎಂ.ಇಬ್ರಾಹಿಮ್ ಆಗ್ರಹ

ಬೆಂಗಳೂರು, ಜು.22: ಕೋವಿಡ್ ಸೋಂಕಿತರು ಮೃತಪಟ್ಟಾಗ ಗೌರವಯುತವಾಗಿ ಅವರ ಅಂತ್ಯಸಂಸ್ಕಾರ ನೆರವೇರಿಸಲು ಸರಕಾರ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಮ್ ಆಗ್ರಹಿಸಿದ್ದಾರೆ.
ಬುಧವಾರ ನಗರದ ಬೆನ್ಸನ್‍ಟೌನ್‍ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿನಿಂದ ಮೃತಪಡುವವರಿಗೆ ಅವರ ಧರ್ಮದ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಲು ಸಾಧ್ಯವಾಗದ, ಅವರ ಕುಟುಂಬ ವರ್ಗದವರು ಅಂತಿಮ ದರ್ಶನ ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸೋಂಕು ಹರಡದಂತೆ ತಡೆಯಲು 3 ಅಡಿಗಳ ಸುರಕ್ಷಿತ ಅಂತರ ಕಾಪಾಡಿಕೊಳ್ಳುವಂತೆ ಹೇಳುತ್ತಾರೆ. ಆದರೆ, ವ್ಯಕ್ತಿ ಮೃತಪಟ್ಟಾಗ ಎಂಟು ಅಡಿಗಳ ಅಂತರ ಯಾಕೆ ಎಂದು ಅರ್ಥವಾಗುತ್ತಿಲ್ಲ. ಸರಕಾರ ಈ ಬಗ್ಗೆ ವೈಜ್ಞಾನಿಕವಾಗಿ ತಜ್ಞರ ಜೊತೆ ಸಮಾಲೋಚನೆ ನಡೆಸಿ ಜನರಲ್ಲಿ ಇರುವ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು.
ಪಡಿತರ ವ್ಯವಸ್ಥೆಯಲ್ಲಿ ಇವತ್ತು ಎಪಿಎಲ್, ಬಿಪಿಎಲ್ ಎಂದು ತಾರತಮ್ಯ ಮಾಡದೆ ಎಲ್ಲರಿಗೂ ದ್ವಿಗುಣ ರೇಷನ್ ನೀಡಬೇಕು. ಜೊತೆಯಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಜನ ಸಾಮಾನ್ಯರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಇಬ್ರಾಹಿಮ್ ಒತ್ತಾಯಿಸಿದರು.
ಕೇಂದ್ರ ಸರಕಾರದಿಂದ ನಮ್ಮ ರಾಜ್ಯಕ್ಕೆ ಕೋವಿಡ್ ಪರಿಸ್ಥಿತಿ ಎದುರಿಸಲು ಎಷ್ಟು ಹಣಕಾಸಿನ ನೆರವು ಬಂದಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಯಿಂದ ಹಿಡಿದು ಯಾವೊಬ್ಬ ಸಚಿವರು ಬಾಯಿ ಬಿಡುತ್ತಿಲ್ಲ. ಇಷ್ಟೊಂದು ಹೆದರಿಕೆ ಯಾಕೆ ಅರ್ಥವಾಗುತ್ತಿಲ್ಲ. ಹಣಕಾಸು ನೆರವು ಬಂದಿದ್ದರೆ ಎಷ್ಟು ಎಂಬುದು ಹೇಳಿ, ಇಲ್ಲದಿದ್ದರೆ ಬಂದಿಲ್ಲ ಎಂದು ಹೇಳಿ ಎಂದು ಸರಕಾರವನ್ನು ಅವರು ಆಗ್ರಹಿಸಿದರು.
ರಾಜ್ಯ ಸರಕಾರ ಕೂಡಲೆ ಸರ್ವಪಕ್ಷಗಳ ಸಭೆಯನ್ನು ಕರೆದು ಕೋವಿಡ್ ಪರಿಸ್ಥಿತಿ ಎದುರಿಸಲು ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಗೌರವಯುತವಾಗಿ ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನಡೆಸುವ ಸಂಬಂಧ ಮಾರ್ಗಸೂಚಿಗಳ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಅನಿವಾರ್ಯವಾಗಿ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಇಬ್ರಾಹಿಮ್ ಎಚ್ಚರಿಕೆ ನೀಡಿದರು.
ಆಗಸ್ಟ್ 1ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ. ಈದುಲ್ ಫಿತ್ರ್ ಅನ್ನು ನಾವು ಮನೆಯಲ್ಲಿಯೆ ಆಚರಣೆ ಮಾಡಿದ್ದೇವೆ. ಲಾಕ್‍ಡೌನ್ ಇದ್ದಿದ್ದರೆ ಬಕ್ರೀದ್ ಹಬ್ಬವನ್ನು ನಾವು ಮನೆಯಲ್ಲಿಯೇ ಆಚರಿಸುತ್ತಿದ್ದೆವು. ಆದರೆ, ಇದೀಗ ಪರಿಸ್ಥಿತಿ ಬಿಗಡಾಯಿಸಿದೆ. ಆದುದರಿಂದ, ಹಬ್ಬವನ್ನು ಸುರಕ್ಷಿತ ಅಂತಹ ಕಾಯ್ದುಕೊಂಡು ಯಾವ ರೀತಿ ಆಚರಿಸಬೇಕು ಎಂಬುದರ ಕುರಿತು ಸರಕಾರ ಸೂಚಿಸಬೇಕು ಎಂದು ಅವರು ಹೇಳಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ನೀಡುವ ಪ್ರಾಣಿ ಬಲಿಗೆ ಅಡ್ಡಿಪಡಿಸುವಂತಹ ಘಟನೆಗಳು ಈ ಹಿಂದೆಯೂ ನಡೆದಿದೆ. ಆದುದರಿಂದ, ಸರಕಾರ ಅನುಮತಿ ನೀಡಿರುವ ಜಾನುವಾರುಗಳ ಸಾಗಾಟಕ್ಕೆ ಯಾವುದೆ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಮುಸ್ಲಿಮರು ಪ್ರಾಣಿಗಳನ್ನು ತಮ್ಮ ಮನೆಯ ಬಳಿ ಬಲಿ ನೀಡುವುದರ ಬದಲಾಗಿ, ವಧಾಗಾರದಲ್ಲಿ ಬಲಿ ನೀಡುವುದು ಉತ್ತಮ ಎಂದು ಇಬ್ರಾಹಿಮ್ ಸಲಹೆ ನೀಡಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ನಡೆಯುವಂತಹ ಜಾನುವಾರುಗಳ ಮಾರಾಟ, ಖರೀದಿ ಪ್ರಕ್ರಿಯೆ ಕೇವಲ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದರಲ್ಲಿ ರೈತರು ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಜನರ ಜೀವನೋಪಾಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಈ ಸಂಬಂಧ ಮುಖ್ಯಮಂತ್ರಿಗೂ ಪತ್ರ ಬರೆದಿದ್ದೇನೆ. ಅಲ್ಲದೆ, ಇನ್ನೆರಡು ದಿನಗಳಲ್ಲಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ ಎಂದು ಅವರು ತಿಳಿಸಿದರು.







