ಕೋವಿಡ್: ಮೃತರ ಅಂತ್ಯಕ್ರಿಯೆ ನಿಯಮ ತಿದ್ದುಪಡಿಗೆ ಒತ್ತಾಯ
ಮಂಗಳೂರು, ಜು.22: ರಾಜ್ಯ ಸರಕಾರವು ಹಂತ ಹಂತವಾಗಿ ಕೊವಿಡ್-19 ನಿರ್ವಹಣೆಯ ನಿಯಮಗಳಲ್ಲಿ ಹಲವು ತಿದ್ದುಪಡಿಗಳನ್ನು ಈಗಾಗಲೇ ಮಾಡಿದ್ದು, ಕೂಡಲೇ ತಜ್ಞ ವೈದ್ಯರು ಮತ್ತು ಹಿರಿಯ ವಿಜ್ಞಾನಿಗಳ ತುರ್ತು ಸಲಹೆ ಪಡೆದು ಕೊರೊನ ಸೋಂಕಿನಿಂದ ಮೃತರಾಗುವವರ ಅಂತ್ಯಕ್ರಿಯೆಯ ನಿಯಮಗಳಲ್ಲೂ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಉಮರ್ ಯು.ಎಚ್. ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಮಾಡಿದ್ದಾರೆ.
ಮುಂಜಾಗ್ರತಾ ಕ್ರಮ ಪಾಲಿಸುವ ಜೊತೆಗೆ, ಎಲ್ಲ ವರ್ಗದ ಜನರೂ ಅವರವರ ಸಂಸ್ಕೃತಿ, ಸಂಪ್ರದಾಯದಂತೆ ಮೃತರ ಅಂತ್ಯಕ್ರಿಯೆ ನಡೆಸುವಂತಾಗಬೇಕು. ಅನಗತ್ಯ ಭಯದಲ್ಲಿರುವ ರಾಜ್ಯದ ಜನತೆಗೆ ಆತ್ಮವಿಶ್ವಾಸ ತುಂಬಿ, ಸಾಂತ್ವನ ನೀಡಬೇಕೆಂದು ಅವರು ಮನವಿ ಸಲ್ಲಿಸಿದ್ದಾರೆ.
ಕೊರೋನ ಸೋಂಕಿತರಾಗಿ ಮೃತರಾಗುವವರ ಶರೀರದಲ್ಲಿ ವೈರಾಣುಗಳು ಜೀವಂತವಾಗಿರುವುದಿಲ್ಲ ಎಂಬುದು ಹಲವು ವಿಜ್ಞಾನಿಗಳು ಮತ್ತು ಹಿರಿಯ ವೈದ್ಯರ ಅಭಿಮತ. ಕೋವಿಡ್ ಸೋಂಕಿತರಾಗಿ ಮೃತರಾದವರ ದಹನ ಅಥವಾ ದಫನ ಕ್ರಿಯೆಗಳು ನಮ್ಮ ಸಂಸ್ಕತಿ, ಸಂಪ್ರದಾಯದಂತೆ ನಡೆಸಲು ಸಾಧ್ಯವಾಗದಿರುವುದು ಮೃತರ ಕುಟುಂಬ, ಬಂಧು-ಮಿತ್ರರಲ್ಲಿ ಮರಣ ವಾರ್ತೆಗಿಂತಲೂ ಹೆಚ್ಚು ನೋವು ಮತ್ತು ಸಂಕಟದಾಯಕವಾಗಿದೆ. ಇದು ಸಮಾಜದಲ್ಲಿ ಅನಗತ್ಯ ಭಯ ಹುಟ್ಟು ಹಾಕುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.





