ಯುನಾನಿ ಮೆಡಿಕಲ್ ಕಾಲೇಜಿನಲ್ಲಿ ನೂತನ ಕೋವಿಡ್ ಕೇರ್ ಸೆಂಟರ್ ಗೆ ಸಚಿವ ವಿ. ಸೋಮಣ್ಣ ಚಾಲನೆ
ಬೆಂಗಳೂರು, ಜು.22: ತಮ್ಮ ಸ್ವಕ್ಷೇತ್ರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಕಾರಿ ಯೂನಾನಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ, ಸುಸಜ್ಜಿತ 175 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಗೆ ಬುಧವಾರ ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.
ಕೋವಿಡ್-19 ಸಂಬಂಧಿಸಿದಂತೆ ಮುಖ್ಯಮಂತ್ರಿಯು ಬೆಂಗಳೂರಿನ ಎಂಟು ವಲಯಗಳಲ್ಲಿ ನಡೆಯುತ್ತಿರುವ ನಿಯಂತ್ರಣಾ ಕಾರ್ಯದ ಬಗ್ಗೆ ಸಭೆ ನಡೆಸಿ ಪರಿಶೀಲಿಸಲಿದ್ದಾರೆ ಎಂದ ಸೋಮಣ್ಣ, ಸರಕಾರವು ಪ್ರತಿಯೊಬ್ಬರ ಜೀವವನ್ನು ಅಮೂಲ್ಯವೆಂದು ನಂಬಿದ್ದು, ಯಾರಿಗೂ ವೈದ್ಯಕೀಯ ಚಿಕಿತ್ಸೆ ದೊರೆಯುವಲ್ಲಿ ಯಾವುದೇ ರೀತಿಯ ಅನಾನುಕೂಲವಾಗದಂತೆ ಎಚ್ಚರ ವಹಿಸಲಾಗುವುದು ಎಂದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನರ ಕೋವಿಡ್ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಆರೋಗ್ಯ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಿ, ಅವರು ಗುಣಮುಖ ಆಗುವವರೆಗೂ ಆರೈಕೆ ಮಾಡುವುದರೊಂದಿಗೆ ಅವರಿಗೆ ಬೇಕಾದ ಪ್ರತಿಯೊಂದು ವ್ಯವಸ್ಥೆಯು ಸರಕಾರವೇ ಮಾಡಿಕೊಡಲಿದೆ ಎಂದು ಸೋಮಣ್ಣ ತಿಳಿಸಿದರು.
ಅಲ್ಲದೆ ರೋಗಿಗಳಿಗೆ ಆಲೋಪತಿ ಮತ್ತು ಯುನಾನಿ ವೈದ್ಯಕೀಯ ಪದ್ಧತಿ ಪ್ರಕಾರ ಚಿಕಿತ್ಸೆ ನೀಡಲಾಗುವುದು. ಇದೇ ರೀತಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೋವಿಡ್ ಸೆಂಟರ್ ತೆರೆಯಲಾಗುವುದು ಎಂದು ಸೋಮಣ್ಣ ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತು ಬಿಬಿಎಂಪಿಯ ಪೂರ್ವ ವಲಯದ ಆರೋಗ್ಯ ಅಧಿಕಾರಿ ಡಾ.ಮನೋರಂಜನ್ ಹೆಗ್ಗಡೆ, ಯುನಾನಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಸಲ್ಮಾ ಬಾನು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.