ನ್ಯಾಯಾಂಗ ನಿಂದನೆ ಪ್ರಕರಣ: ಟ್ವಿಟರ್, ಪ್ರಶಾಂತ್ ಭೂಷಣ್‌ಗೆ ಸುಪ್ರೀಂ ನೋಟಿಸ್

ಹೊಸದಿಲ್ಲಿ, ಜು.22: ನ್ಯಾಯಾಂಗದ ವಿರುದ್ಧ ಗಂಭೀರ ಆರೋಪ ಮಾಡಿರುವ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ನ್ಯಾಯವಾದಿ ಪ್ರಶಾಂತ್ ಭೂಷಣ್‌ಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಟ್ವಿಟರ್ ಇಂಡಿಯಾಕ್ಕೂ ನೋಟಿಸ್ ಜಾರಿಯಾಗಿದೆ.
ದೇಶದ ಪ್ರಜಾಪ್ರಭುತ್ವಕ್ಕೆ ಹಾನಿ ಉಂಟು ಮಾಡುವುದರಲ್ಲಿ ನ್ಯಾಯಾಂಗದ ಕೈವಾಡವೂ ಇದೆ ಎಂದು ಕಳೆದ ತಿಂಗಳು ಭೂಷಣ್ ಟ್ವೀಟ್ ಮಾಡಿದ್ದರು. ಈ ಹೇಳಿಕೆ ನ್ಯಾಯಾಂಗ ನಿಂದನೆ ಎಂದು ತಿಳಿದಿದ್ದರೂ ಯಾಕೆ ಅದನ್ನು ತೆಗೆದು ಹಾಕಿಲ್ಲ ಎಂದು ಉತ್ತರಿಸುವಂತೆ ಸೂಚಿಸಿ ಟ್ವಿಟರ್‌ಗೆ ನೋಟಿಸ್ ಜಾರಿಯಾಗಿದೆ. ಪ್ರಶಾಂತ್ ಭೂಷಣ್ ಅವರ ಟ್ವೀಟ್‌ನಿಂದ ಸುಪ್ರೀಂಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಾಧೀಶರ ಕಚೇರಿಯ ಘನತೆ ಮತ್ತು ಗೌರವಕ್ಕೆ ಕುಂದುಂಟಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ ಆದೇಶದಲ್ಲಿ ತಿಳಿಸಲಾಗಿದೆ. ಪ್ರಶಾಂತ್ ಭೂಷಣ್ ಮಾಡಿರುವ ಎರಡು ಟ್ವೀಟ್‌ಗೆ ಸಂಬಂಧಿಸಿ ಈ ನೋಟಿಸ್ ಜಾರಿಯಾಗಿದೆ. ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ಎಸ್‌ಎ ಬೋಬ್ಡೆ ದುಬಾರಿ ಬೆಲೆಯ ಹಾರ್ಲೆ ಡೇವಿಡ್‌ಸನ್ ಬೈಕ್‌ನ ಮೇಲೆ ಕುಳಿತಿರುವ ಫೋಟೋವನ್ನು ಟೀಕಿಸಿಯೂ ಭೂಷಣ್ ಟ್ವೀಟ್ ಮಾಡಿದ್ದರು.
ಈ ಪ್ರಕರಣದಲ್ಲಿ ನಿಜವಾದ ಪ್ರತಿವಾದಿ ಕ್ಯಾಲಿಫೋರ್ನಿಯಾ ಮೂಲದ ಟ್ವಿಟರ್ ಐಎನ್‌ಸಿ, ಭಾರತದ ಟ್ವಿಟರ್ ಅಲ್ಲ ಎಂದು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಅರುಣ್ ಮಿಶ್ರ, ಬಿಆರ್ ಗವಾಯಿ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ ತಿಳಿಸಿತು. ಅಲ್ಲದೆ ಈ ವಿಷಯದಲ್ಲಿ ಅಗತ್ಯ ಎಂದು ಭಾವಿಸಿದರೆ ಅರ್ಜಿ ಸಲ್ಲಿಸಲು ಟ್ವಿಟರ್‌ಗೆ ಅವಕಾಶವಿದೆ ಎಂದು ನ್ಯಾಯಪೀಠ ಹೇಳಿದೆ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿದ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆಯನ್ನು ಆಗಸ್ಟ್ 5ಕ್ಕೆ ನಿಗದಿಗೊಳಿಸಿದೆ.







