ಭಾರತದ ಡೋಪ್ ಪ್ರಯೋಗಾಲಯ ಅಮಾನತು ಇನ್ನೂ 6ತಿಂಗಳ ವಿಸ್ತರಣೆ
ಹೊಸದಿಲ್ಲಿ, ಜು.22: ಅಂತರ್‌ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರದ ಕಾರಣಕ್ಕಾಗಿ ರಾಜಧಾನಿಯಲ್ಲಿರುವ ಭಾರತದ ರಾಷ್ಟ್ರೀಯ ಡೋಪ್ ಪರೀಕ್ಷಾ ಪ್ರಯೋಗಾಲಯವನ್ನು (ಎನ್‌ಡಿಟಿಎಲ್) ಆರು ತಿಂಗಳವರೆಗೆ ಎರಡನೇ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ವಿಶ್ವ ಡೋಪಿಂಗ್ ನಿಗ್ರಹ ಸಂಸ್ಥೆ (ವಾಡಾ) ಹೇಳಿದೆ.
ವಾಡಾ ನಿಯೋಗ ಕಳೆದ ಆಗಸ್ಟ್‌ನಲ್ಲಿ ಭೇಟಿ ನೀಡಿದಾಗ ಈ ಪ್ರಯೋಗಾಲಯದ ಕಾರ್ಯವೈಖರಿ ಸಮರ್ಪಕವಾಗಿರದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿತ್ತು. ಈ ಪ್ರಯೋಗಾಲಯ ಮೂತ್ರ ಮತ್ತು ರಕ್ತದ ಮಾದರಿಗಳ ಎಲ್ಲಾ ವಿಶ್ಲೇಷಣೆಗಳು ಸೇರಿದಂತೆ ಡೋಪಿಂಗ್ ನಿಗ್ರಹ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಫೆಬ್ರವರಿ 2020ರಲ್ಲಿ ಆರು ತಿಂಗಳ ಅಮಾನತು ಅವಧಿ ಮುಗಿದ ನಂತರವೂ ಪ್ರಯೋಗಾಲಯದ ವ್ಯವಸ್ಥೆ ಇನ್ನೂ ಸರಿಯಾಗಿಲ್ಲ ಎಂದು ವಾಡಾ ಹೇಳಿಕೆಯಲ್ಲಿ ತಿಳಿಸಿದೆ. ಜುಲೈ 17ರಿಂದ ಪ್ರಾರಂಭವಾದ ಆರು ತಿಂಗಳ ಹೆಚ್ಚುವರಿ ಅಮಾನತಿಗೆ ಶಿಫಾರಸು ಮಾಡಿದ ಸ್ವತಂತ್ರ ಸಮಿತಿಯು ಶಿಸ್ತು ಕ್ರಮಗಳನ್ನು ಕೈಗೊಂಡಿದೆ ಎಂದು ವಾಡಾ ತಿಳಿಸಿದೆ.
ವಿಶ್ವ ಡೋಪಿಂಗ್ ನಿಗ್ರಹ ಸಂಹಿತೆಯ ಪ್ರಕಾರ, ವಾಡಾ ನಿರ್ಧಾರದ ವಿರುದ್ಧ ಪ್ರಯೋಗಾಲಯವು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಹೊಂದಿದೆ.







