ಐಪಿಎಲ್ ಮೊದಲು ಯುಎಇಯಲ್ಲಿ ಭಾರತ-ಆಫ್ರಿಕಾ ಟ್ವೆಂಟಿ-20 ಸರಣಿ
ಇಂಡಿಯನ್ ಪ್ರೀಮಿಯರ್ ಲೀಗ್ ಸೆ. 26ರಿಂದ ನ.8ರ ತನಕ ಸಾಧ್ಯತೆ

ಹೊಸದಿಲ್ಲಿ, ಜು.22: ಇಂಡಿಯನ್ ಪ್ರೀಮಿಯರ್ ಲೀಗ್ ಮುಂಚಿತವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟ್ವೆಂಟಿ-20 ಪಂದ್ಯಗಳ ಸರಣಿಯನ್ನು ಆಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಚಿಸುತ್ತಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಐಪಿಎಲ್ ಟ್ವೆಂಟಿ-20 ಟೂರ್ನಿಯನ್ನು ಸೆಪ್ಟಂಬರ್ 26 ರಿಂದ ನವೆಂಬರ್ 8ರ ಅವಧಿಯಲ್ಲಿ ನಡೆಸಲು ಕ್ರಿಕೆಟ್ ನಿಯಂತ್ರಣ ಮಂಡಳಿ ಚಿಂತಿಸುತ್ತಿದೆ. ಆದರೆ ದೀಪಾವಳಿ (ನವೆಂಬರ್ 14) ಮೊದಲು ಟೂರ್ನಿಯನ್ನು ಮುಗಿಸಲು ಆತಿಥೇಯ ಪ್ರಸಾರಕರಾದ ಸ್ಟಾರ್‌ಗೆ ಆಸಕ್ತಿ ಇಲ್ಲ ಎಂದು ತಿಳಿದು ಬಂದಿದೆ.
ಈ ಕಾರಣದಿಂದಾಗಿ ಬಿಸಿಸಿಐ ಸ್ಟಾರ್‌ನೊಂದಿಗೆ ಚರ್ಚಿಸಲು ಆಯ್ಕೆಗಳನ್ನು ರೂಪಿಸುತ್ತಿದೆ, ಅದರಲ್ಲಿ ಒಂದು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು ನಡೆಸುವುದು. ಸ್ಟಾರ್‌ನ ಬೇಡಿಕೆಗಳಿಗೆ ಅನುಗುಣವಾಗಿ ಸಂಜೆ ಪಂದ್ಯಗಳನ್ನು ಕಡಿಮೆ ಮಾಡಲು ಸೆಪ್ಟಂಬರ್ 26ರ ಬದಲು ಸೆಪ್ಟಂಬರ್ 19ರಂದು ಐಪಿಎಲ್ ಆರಂಭಿಸಲು ಮಂಡಳಿಯು ಚಿಂತಿಸುತ್ತಿದೆ.
ದಕ್ಷಿಣ ಆಫ್ರಿಕಾದ (ಸಿಎಸ್‌ಎ) ದೇಶದಲ್ಲಿನ ಪ್ರಸಾರ ಹಕ್ಕುಗಳ ಮೇಲೆ ಕಣ್ಣಿಟ್ಟಿರುವ ಸ್ಟಾರ್‌ಗೆಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿಯು ‘ವೇಗವರ್ಧಕ’ ವಾಗಲಿದೆ ಎಂದು ವರದಿ ಹೇಳಿದೆ.
ಕೋವಿಡ್ -19 ಪರಿಸ್ಥಿತಿಗೆ ಅನುಗುಣವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮೂರು ಟ್ವೆಂಟಿ-20 ಪಂದ್ಯಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಲು ಯೋಜಿಸುತ್ತಿವೆ ಎಂಬ ವರದಿಗಳು ಮೇ ತಿಂಗಳಲ್ಲಿ ಕೇಳಿ ಬಂದಿದ್ದವು. ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ಭಾರತದಲ್ಲಿ ಕೋವಿಡ್ -19 ಪರಿಸ್ಥಿತಿ ಇನ್ನೂ ಸುಧಾರಣೆಯಾಗದ ಹಿನ್ನೆಲೆಯಲ್ಲಿ ಯುಎಇಯಲ್ಲಿ ಐಪಿಎಲ್ ಟ್ವೆಂಟಿ-20 ಪಂದ್ಯಾವಳಿಯ 13ನೇ ಆವೃತ್ತಿಯನ್ನು ನಡೆಸಲಾಗುವುದು ಎಂದು ಮಂಗಳವಾರ ದೃಡಪಡಿಸಿದರು. ಮಂಡಳಿಯಿಂದ ಅಧಿಕೃತ ಪ್ರಕಟನೆ ಇನ್ನೂ ಹೊರಬಂದಿಲ್ಲ. ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಮೊದಲು ಬಿಸಿಸಿಐ ಭಾರತ ಸರಕಾರದ ಅನುಮೋದನೆಗಾಗಿ ಕಾಯುತ್ತಿದೆ.
‘‘ಐಪಿಎಲ್ ಟೂರ್ನಿಯ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಮತ್ತು ಮುಂದಿನ ಏಳು ಅಥವಾ ಹತ್ತು ದಿನಗಳಲ್ಲಿ ನಡೆಯಲಿರುವ ಐಪಿಎಲ್ ಜಿಸಿಯಲ್ಲಿ ನಿರ್ಧರಿಸಲಾಗುತ್ತದೆ. ದುಬೈ, ಅಬುಧಾಬಿ ಮತ್ತು ಶಾರ್ಜಾ ಮೂರು ಪ್ರಮುಖ ಸ್ಥಳಗಳಾಗಿವೆ ’’ಎಂದು ಪಟೇಲ್ ದೃ ಢಪಡಿಸಿದರು.
‘‘ಪಂದ್ಯಾವಳಿಯನ್ನು ಮುಚ್ಚಿದ ಬಾಗಿಲುಗಳ ಹಿಂದೆ ಆಡಲಾಗುತ್ತದೆಯೇ’’ ಎಂದು ಕೇಳಿದಾಗ ‘‘ಅದು ಯುಎಇ ಸರಕಾರವನ್ನು ಅವಲಂಬಿಸಿದೆ ’’ಎಂದು ಹೇಳಿದರು.







