ಎರಡು ವಾರಗಳ ನಂತರ ಬಿಸಿಸಿಐ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ಹೊಸದಿಲ್ಲಿ, ಜು.22: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಮತ್ತು ಕಾರ್ಯದರ್ಶಿ ಜಯ ಶಾ ಅಧಿಕಾರಾವಧಿಯನ್ನು ನಿರ್ಧರಿಸುವ ಸಂವಿಧಾನದ ತಿದ್ದುಪಡಿಗಾಗಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಎರಡು ವಾರಗಳ ನಂತರ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿತು.
ಬಿಸಿಸಿಐ ಅಥವಾ ಯಾವುದೇ ರಾಜ್ಯ ಸಂಘದಲ್ಲಿ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳು ಸತತ ಆರು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸಿದ ಬಳಿಕ ನಿರ್ವಾಹಕರು ಮೂರು ವರ್ಷಗಳ ಕೂಲಿಂಗ್-ಆಫ್ (ವಿಶ್ರಾಂತಿ ಅವಧಿ)ನಿಯಮವನ್ನು ಅನುಸರಿಸಬೇಕಾಗುತ್ತದೆ. ಬಿಸಿಸಿಐ ತನ್ನ ಹೊಸ ಸಂವಿಧಾನದಲ್ಲಿ ಈ ನಿಯಮ ವನ್ನು ಪರಿಷ್ಕರಿಸುವಂತೆ ನ್ಯಾಯಾಲಯವನ್ನು ಕೋರಿದೆ. ಕೂಲಿಂಗ್ ಆಫ್ ನಿಯಮವು ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸಮಿತಿಯು ದೇಶದಲ್ಲಿ ಕ್ರಿಕೆಟ್ ಆಡಳಿತವನ್ನು ಸುಧಾರಿಸಲು ನೀಡಿದ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ.
ಮುಖ್ಯ ನ್ಯಾಯಮೂರ್ತಿ ಶರದ್ ಎ. ಬೊಬ್ಡೆ ಮತ್ತು ಎಲ್. ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು ಮುಂದಿನ ವಾರ ಅರ್ಜಿಗಳನ್ನು ಆಲಿಸಲು ಸಾಧ್ಯವಿಲ್ಲ. ಏಕೆಂದರೆ ನ್ಯಾಯಪೀಠ ಮರಾಠಾ ಮೀಸಲಾತಿ ಪ್ರಕರಣದಲ್ಲಿ ವಿಚಾರಣೆಯಲ್ಲಿ ನಿರತವಾಗಿದೆ. ಬಿಸಿಸಿಐ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ.ಆದರೆ ಉಲ್ಲೇಖಿಸಲಾಗಿದೆ.ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಪ್ರತ್ಯೇಕ ಅರ್ಜಿಗಳನ್ನು ಹದಿನೈದು ದಿನಗಳ ನಂತರ ಮುಂದಿನ ವಿಚಾರಣೆಯಲ್ಲಿಯೂ ಕೇಳ ಲಾಗುವುದು ಎಂದು ಸಿಜೆಐ ತಿಳಿಸಿದೆ.
ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಜುಲೈ 4ರಂದು ಸುಪ್ರೀಂ ಕೋರ್ಟ್‌ನಲ್ಲಿ ಇಂಟರ್ಲೋಕ್ಯೂಟರಿ ಅರ್ಜಿಯನ್ನು ಸಲ್ಲಿಸಿತ್ತು.







