ಮುಲಾಯಂ ಪತ್ನಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಲಕ್ನೋ, ಜು.6: ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಗುಪ್ತಾ ಯಾದವ್ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರನ್ನು ಸೋಮವಾರ ಲಕ್ನೋದ ಮೇಧಾಂತ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಆಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದಾಗ್ಯೂ ಅವರ ಮೇಲೆ ಕೊರೋನ ಪರೀಕ್ಷೆಯನ್ನು ನಡೆಸಲಾಗಿದ್ದು, ನೆಗೆಟಿವ್ ಫಲಿತಾಂಶ ಬಂದಿದೆ.
ಸಾಧನಾ ಅವರು ಒಂದು ವಾರದ ಹಿಂದೆಯೂ, ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗಲೂ ಅವರ ರಕ್ತದೊತ್ತಡವು ತುಂಬಾ ಅಧಿಕವಾಗಿತ್ತು. ಅವರಿಗೆ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಲಾಗಿತ್ತು ಎಂದು ಮೇಧಾಂತದ ನಿರ್ದೇಶಕ ಡಾ.ರಾಕೇಶ್ ಕಪೂರ್ ಹೇಳಿದ್ದಾರೆ.
ಸಾಧನಾರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮುನ್ನ ಅವರನ್ನು ವೈದ್ಯಕೀಯ ನಿಗಾವಣೆಯಲ್ಲಿರಿಸಲಾಗುವುದು ಎಂದು ಕಪೂರ್ ಹೇಳಿದ್ದಾರೆ.
Next Story