ಟ್ವೆಂಟಿ -20 ವಿಶ್ವಕಪ್ ಮುಂದೂಡಿಕೆ: ಹಿರಿಯ ಆಟಗಾರರ ಆಡುವ ಕನಸಿಗೆ ತಣ್ಣೀರು

ಹೊಸದಿಲ್ಲಿ, ಜು.22: ಐಸಿಸಿ ಟ್ವೆಂಟಿ-20 ವಿಶ್ವಕಪ್ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪಂದ್ಯಾವಳಿ. ಆದರೆ ಇದೀಗ ಜಗತ್ತು ಕೋವಿಡ್-19 ಎದುರಿಸುತ್ತಿರುವ ಕಾರಣ ಒಂದು ವರ್ಷ ಮುಂದೂಡಲಾಗಿದೆ. ಇದರಿಂದಾಗಿ ವಿಶ್ವಕಪ್ ಆಡುವುದರೊಂದಿಗೆ ವೃತ್ತಿಬದುಕನ್ನು ಕೊನೆಗೊಳಿಸುವ ಚಿಂತನೆಯಲ್ಲಿದ್ದ ಹಲವು ಮಂದಿ ಖ್ಯಾತ ಕ್ರಿಕೆಟರಿಗೆ ವಯಸ್ಸು ಅಡ್ಡಿಯಾಗುವ ಸಾಧ್ಯತೆಯಿದೆ.
2016ರಲ್ಲಿ ಕೊನೆಯ ಬಾರಿ ಟ್ವೆಂಟಿ-20 ವಿಶ್ವಕಪ್ ಭಾರತದಲ್ಲಿ ನಡೆದಿತ್ತು. 2020ರಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಮುಂದೂಡಲ್ಪಟ್ಟಿದೆ. ಇದರಿಂದಾಗಿ ಐದೂವರೆ ವರ್ಷಗಳ ನಂತರ ವಿಶ್ವಕಪ್ ಟೂರ್ನಿಯನ್ನು ನೋಡುವಂತಾಗಲಿದೆ.
ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ವರ್ಷ ಸುದೀರ್ಘ ಸಮಯವಾಗಿದೆ. ಈ ಕಾರಣದಿಂದಾಗಿ 2020ನೇ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಿ ವೃತ್ತಿಬದುಕನ್ನು ಕೊನೆಗೊಳಿಸುವ ಕನಸು ಕಾಣುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ, ವಿಂಡೀಸ್‌ನ ಡ್ವೇಯ್ನಿ ಬ್ರಾವೋ, ಕ್ರಿಸ್ ಗೇಲ್, ಆಫ್ರಿಕಾದ ಎಬಿ ಡಿವಿಲಿಯರ್ಸ್, ಶ್ರೀಲಂಕಾದ ಲಸಿತ್ ಮಾಲಿಂಗ ಸೇರಿದಂತೆ ಹಲವು ಮಂದಿ ಖ್ಯಾತ ಕ್ರಿಕೆಟಿಗರಿಗೆ ನಿರಾಸೆ ಉಂಟಾಗಿದೆ.
ಎಂ.ಎಸ್.ಧೋನಿ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಈಗ 39ರ ಹರೆಯ. ಅವರು 2020ರ ಪಂದ್ಯಾವಳಿಯಲ್ಲಿ ಆಡುವ ಬಗ್ಗೆ ಯೋಚಿಸುತ್ತಿದ್ದರು. ಕಳೆದ ವರ್ಷ ಜುಲೈನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡಿದ ಬಳಿಕ ಅವರು ಮತ್ತೆ ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಧೋನಿ ನಿವೃತ್ತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ.
ಮುಂದಿನ ವರ್ಷ ವಿಶ್ವಕಪ್ ಹೊತ್ತಿಗೆ ಧೋನಿಗೆ 40 ವರ್ಷ ತುಂಬಿರುತ್ತದೆ. ಆಗ ರಿಷಭ್ ಪಂತ್ ಸೇರಿದಂತೆ ಯುವ ವಿಕೆಟ್‌ಕೀಪರ್‌ಗಳು ಅವರನ್ನು ಮೀರಿಸಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಟ್ವೆಂಟಿ-20 ವಿಶ್ವಕಪ್‌ನ ಮುಂದೂಡಿಕೆಯಿಂದ ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಆರ್. ಅಶ್ವಿನ್ ಮತ್ತು ಕ್ರನಾಲ್ ಪಾಂಡ್ಯ ಮುಂತಾದ ಆಟಗಾರರ ಭವಿಷ್ಯಕ್ಕ್ಕೂ ಕುತ್ತು ಉಂಟಾಗಿದೆ.
ಡ್ವೇಯ್ನ ಬ್ರಾವೋ: ಈ ವರ್ಷದ ಆರಂಭದಲ್ಲಿ ಟ್ವೆಂಟ-20 ವಿಶ್ವಕಪ್ ಮೇಲೆ ಕಣ್ಣಿಟ್ಟ ಬ್ರಾವೋ ನಿವೃತ್ತಿಯಿಂದ ಹಿಂದೆ ಸರಿದಿದ್ದರು. ಅಂದಿನಿಂದ ಬ್ರಾವೋ ಐದು ಟ್ವೆಂಟಿ-20 ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ದರು. ಆದರೆ ಮುಂದಿನ ವಿಶ್ವಕಪ್ ಹೊತ್ತಿಗೆ ಅವರಿಗೆ 38 ವರ್ಷವಾಗುತ್ತದೆ. ಆಗ ಅನನುಭವಿ ವೇಗಿಗಳು ಹೆಚ್ಚಿನ ಅನುಭವವನ್ನು ಪಡೆಯಬಹುದು. ಬ್ರಾವೋಗೆ ವಯಸ್ಸು ಅಡ್ಡಿಯಾಗಬಹುದು. ವೆಸ್ಟ್ ಇಂಡೀಸ್ ಟ್ವೆಂಟಿ-20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಅವರು ತಮ್ಮ ಅಂತರ್‌ರಾಷ್ಟ್ರೀಯ ವೃತ್ತಿಜೀವನವನ್ನು ಮುಂದುವರಿಸುತ್ತಾರೆಯೇ ಎನ್ನುವುದು ಆಸಕ್ತಿದಾಯಕವಾಗಿದೆ.
ಕ್ರಿಸ್ ಗೇಲ್: ವಿಶ್ವದ ಅತ್ಯುತ್ತಮ ಟ್ವೆಂಟಿ-20 ಬ್ಯಾಟ್ಸ್‌ಮನ್ ವಿಂಡಿಸ್ನ ಕ್ರಿಸ ಗೇಲ್ ಗೇಲ್ ಕೊನೆಯದಾಗಿ ಮಾರ್ಚ್ 2019ರಲ್ಲಿ ಟ್ವೆಂಟಿ-20 ಆಡಿದ್ದರು. ಲೆಂಡ್ಲ್ ಸಿಮೊನ್ಸ್ ಮತ್ತು ಬ್ರಾಂಡನ್ ಕಿಂಗ್ ಅಗ್ರಸರದಿಯಲ್ಲಿ ತಳವೂರಿದ ಬಳಿಕ ಗೇಲ್ ಪ್ರಾಮುಖ್ಯತೆ ಕಡಿಮೆಯಾಗಿದೆ. ಅವರ ಮತ್ತು ವೆಸ್ಟ್ ಇಂಡೀಸ್‌ನ ಟ್ವೆಂಟಿ-20 ವಿಶ್ವಕಪ್‌ನ ಯೋಜನೆಗಳು ಸ್ಪಷ್ಟವಾಗಿಲ್ಲ.ಆದರೆ ವಿಶ್ವಕಪ್ ಮುಂದೂಡಿರುವ ಹಿನ್ನೆಲೆಯಲ್ಲಿ ಗೇಲ್‌ಗೆ ಅವಕಾಶ ಸಿಗುವ ಸಾಧ್ಯತೆ ಕ್ಷೀಣಿಸಿದೆ. ಏಕೆಂದರೆ 2021ರ ನವಂಬರ್ ಹೊತ್ತಿಗೆ ಅವರ ವಯಸ್ಸು 42 ಆಗುತ್ತದೆ.
ಎಬಿ ಡಿವಿಲಿಯರ್ಸ್: ದ.ಆಫ್ರಿಕಾದ ಎಬಿ ಡಿ ವಿಲಿಯರ್ಸ್ 2018ರಲ್ಲಿ ನಿವೃತ್ತರಾಗಿದ್ದರು.ಕಳೆದ ವರ್ಷ ವಿಶ್ವಕಪ್‌ನಲ್ಲಿ ಡಿವಿಲಿಯರ್ಸ್ ಆಡಲು ಬಯಸಿದ್ದರು. ಆದರೆ ಅವರು ನಿರ್ಧಾರ ಪ್ರಕಟಿಸುವ ಹೊತ್ತಿಗೆ ಸ್ವಲ್ಪ ತಡವಾಗಿತ್ತು. ದಕ್ಷಿಣ ಆಫ್ರಿಕಾ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲಿ ನಿರ್ಗಮಿಸಿತ್ತು. ನೆವಂಬರ್ 2021ರ ವೇಳೆಗೆ ಡಿವಿಲಿಯರ್ಸ್ ವಯಸ್ಸು 38ಕ್ಕೆ ಹತ್ತಿರವಾಗಲಿದೆ.
ಡಿವಿಲಿಯರ್ಸ್ ಅವರಂತೆ ಡೇಲ್ ಸ್ಟೇನ್ ಮತ್ತು ಇಮ್ರಾನ್ ತಾಹಿರ್ ಅವರಂತಹ ಇತರ ಅನುಭವಿಗಳೂ ಸಹ ವಿಶ್ವಕಪ್ ಮುಂದೂಡಿಕೆಯಿಂದ ತೊಂದರೆಗೊಳಗಾಗಿದ್ದಾರೆ. ಟೆಸ್ಟ್‌ನಿಂದ ನಿವೃತ್ತಿ ಹೊಂದಿದ ಮತ್ತು ಕೊನೆಯದಾಗಿ ಮಾರ್ಚ್ 2019ರಲ್ಲಿ ಏಕದಿನ ಪಂದ್ಯ ಆಡಿದ ಸ್ಟೇನ್ ತಮ್ಮ ಟ್ವೆಂಟಿ-20 ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ. ವಿಶ್ವಕಪ್ 2021ರ ವೇಳೆಗೆ ಅವರು 38 ಆಗುತ್ತದೆ. 41ರ ಹರೆಯದ ತಾಹಿರ್ ಈಗಾಗಲೇ ನಿವೃತ್ತರಾಗಿದ್ದಾರೆ. ಅವರು ಫ್ರಾಂಚೈಸ್ ಕ್ರಿಕೆಟ್ ಜಗತ್ತಿನಲ್ಲಿ ಸಕ್ರಿಯರಾಗಿದ್ದರೂ ಮಾರ್ಚ್ 2019ರಲ್ಲಿ ಕೊನೆಯ ಬಾರಿಗೆ ಟ್ವೆಂಟಿ-20 ಆಡಿದ್ದರು.
ಲಸಿತ್ ಮಾಲಿಂಗ: ಟ್ವೆಂಟಿ-20 ವಿಶ್ವಕಪ್‌ನ ನಾಕೌಟ್ ಸುತ್ತಿನಲ್ಲಿ ಆಡುವುದು ನನ್ನ ಏಕೈಕ ಗುರಿಯಾಗಿದೆ ಎಂದು ಹೇಳಿರುವ ಶ್ರೀಲಂಕಾದ ಟ್ವೆಂಟಿ-20 ಕ್ರಿಕೆಟ್ ನಾಯಕ ವಿಶ್ವಕಪ್ ನಂತರ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ. ವಿಶ್ವಕಪ್ ವೇಳೆಗೆ ಅವರ ವಯಸ್ಸು 38 ಆಗಿರುತ್ತದೆ.
ಶುಐಬ್ ಮಲಿಕ್ ಮಹಮ್ಮದ್ ಹಫೀಝ್: ವಿಶ್ವಕಪ್ ನಂತರ ನಿರಂತರವಾಗಿ ಕಡೆಗಣಿಸಲ್ಪಟ್ಟಿದ್ದ ಶುಐಬ್ ಮಲಿಕ್ ಮತ್ತು ತಂಡದ ಹಿರಿಯ ಆಟಗಾರ ಮಹಮ್ಮದ್ ಹಫೀಝ್ ಬಾಂಗ್ಲಾದೇಶ ವಿರುದ್ಧದ ತವರು ಸರಣಿಯಲ್ಲಿ ಪಾಕಿಸ್ತಾನ ಟ್ವೆಂಟಿ-20 ತಂಡಕ್ಕೆ ವಾಪಸಾಗಿದ್ದರು. ಮುಂದಿನ ವರ್ಷ 40 ವರ್ಷವಾಗಲಿರುವ ಹಫೀಝ್ ಪಂದ್ಯಾವಳಿಯನ್ನು ಮುಂದೂಡಿದ್ದರೂ ಸಹ ಲಭ್ಯವಾಗುವುದಾಗಿ ಈಗಾಗಲೇ ಹೇಳಿದ್ದಾರೆ.
ಮಲಿಕ್‌ಗೆ ಏತನ್ಮಧ್ಯೆ 39 ವರ್ಷ ವಾಗಲಿದೆ.ಈ ಕಾರಣದಿಂದಾಗಿ ಮಲಿಕ್‌ಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಬಹುದೇ ಎನ್ನುವುದನ್ನು ಕಾಲವೇ ಹೇಳಬೇಕಷ್ಟೆ.







