ಖ್ಯಾತ ಉದ್ಯಮಿ, ಕೊಡುಗೈ ದಾನಿ ಮುಝಫ್ಫರ್ ಕೋಲಾ ನಿಧನ
ಭಟ್ಕಳ, ಜು.23: ಹಲವು ಶೈಕ್ಷಣಿಕ-ಧಾರ್ಮಿಕ ಸಂಸ್ಥೆಗಳ ಪೋಷಕರಾಗಿದ್ದ ಭಟ್ಕಳದ ಖ್ಯಾತ ಉದ್ಯಮಿ ಮುಹಮ್ಮದ್ ಮುಝಫ್ಫರ್ ಕೋಲಾ (70) ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅನಾರೋಗ್ಯದ ನಿಮಿತ್ತ ಕಳೆದ ಎರಡು ವಾರಗಳ ಹಿಂದೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಮೃತದೇಹವನ್ನು ಬುಧವಾರ ರಾತ್ರಿ ಮಂಗಳೂರಿನಿಂದ ಭಟ್ಕಳಕ್ಕೆ ತಂದು ಗುರುವಾರ ಬೆಳಗಿನ ಜಾವ ದಫನ ಕಾರ್ಯವನ್ನು ನೆರವೇರಿಸಲಾಯಿತು.
ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರು, ಕುಟುಂಸ್ಥರು ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.
1995ರಿಂದ 25 ವರ್ಷಗಳ ಕಾಲ ಗಲ್ಫ್ ರಾಷ್ಟ್ರಗಳಲ್ಲಿ ಪ್ರಮುಖ ಉದ್ಯಮಗಳಲ್ಲಿ ಮುಝಫ್ಫರ್ ಕೋಲಾ ತೊಡಗಿಸಿಕೊಂಡಿದ್ದರು. ಮಂಗಳೂರು, ಬೆಂಗಳೂರು, ಮುಂಬೈಗಳಲ್ಲಿ ತಮ್ಮ ಉದ್ಯಮಗಳನ್ನು ಸ್ಥಾಪಿಸಿ ಸಮುದಾಯದ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದರು. ಅಲ್ಲದೆ ಬಹರೈನ್, ದುಬೈ, ಮಸ್ಕತ್, ಕುವೈತ್, ಖತರ್ ರಾಷ್ಟ್ರಗಳಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಂಡಿದ್ದರು. ಭಟ್ಕಳದಲ್ಲಿ ಮೊತ್ತ ಮೊದಲ ಶಾಪಿಂಗ್ ಕಾಂಪ್ಲೆಕ್ಸ್ ‘ಆಯಿಶಾ ಪ್ಲಾಝಾ’ ಆರಂಭಿಸಿದ ಹೆಗ್ಗಳಿಕೆ ಇವರದ್ದು.
ಹೆಚ್ಚಿನ ವಿದ್ಯಾಭ್ಯಾಸ ಪಡೆಯದ ಇವರು ಭಟ್ಕಳದಲ್ಲಿ ನೌನಿಹಾಲ್ ಸೆಂಟ್ರಲ್ ಸ್ಕೂಲ್ ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದರು. ಭಟ್ಕಳದಲ್ಲಿ ಯಾವುದೇ ಆರೋಗ್ಯ ಸೇವೆ ಇಲ್ಲದ ಆಗಿನ ಸಂದರ್ಭದಲ್ಲಿ ಕೊಲಾಕೋ ಆಸ್ಪತ್ರೆ (ಈಗಿನ ವೆಲ್ಫೇರ್ಆಸ್ಪತ್ರೆ) ಸ್ಥಾಪಿಸಿ ಕಡಿಮೆ ವೆಚ್ಚದಲ್ಲಿ ಬಡವರಿಗೆ ಆರೋಗ್ಯ ಸೇವೆ ನೀಡುವ ವ್ಯವಸ್ಥೆಯನ್ನುಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ದೇಶದ ವಿವಿಧ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಹಾಗೂ ಧಾರ್ಮಿಕ ವಿದ್ವಾಂಸರ ಕುರಿತು ಅಪಾರ ಗೌರವವನ್ನು ಹೊಂದಿದ್ದ ಇವರು ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ಉದಾರವಾಗಿ ಧನಸಹಾಯ ನೀಡುವುದರ ಅದರ ಸಂಸ್ಥೆಯ ಪೋಷಕರಾಗಿದ್ದರು. ಧಾರ್ಮಿಕ ವಿದ್ವಾಂಸರು, ಉಲಮಾಗಳಿಗೆ ಹೆಚ್ಚಿನ ಸಹಾಯವನ್ನೂ ಒದಗಿಸುತ್ತಿದ್ದರು.
ಮುಝಫ್ಫರ್ ಕೋಲಾ ಅವರ ಅಳಿಯ ಹಾಗೂ ನೌನಿಹಾಲ್ ಶಿಕ್ಷಣ ಸಂಸ್ಥೆಯ ಪ್ರಮುಖ ಮೌಲಾನ ಮೂಸಾ ನದ್ವಿ ಮಾಧ್ಯಮಗಳೊಂದಿಗೆ ಮಾತನಾಡಿ, ದಿವಂಗತ ಮುಝಫ್ಫರ್ ಕೋಲಾರವರು ಹಿರಿಯ ಧಾರ್ಮಿಕ ವಿದ್ವಾಂಸರೊಂದಿಗೆ ತುಂಬಾ ಆತ್ಮೀಯತೆಯಿಂದ ಇರುತ್ತಿದ್ದು, ಜಗದ್ವಿಖ್ಯಾತ ಮೌಲಾನ ಅಲಿಮಿಯಾ ನದ್ವಿ(ರ) ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಅಲ್ಲದೆ ನದ್ವತುಲ್ ಉಲಮಾ, ದೇವಬಂದ್ ಸಂಸ್ಥೆಯ ವಿದ್ವಾಂಸರೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು.
ಬಡವರ ಕುರಿತಂತೆ ಅತ್ಯಂತ ಕಾಳಜಿಯುಳ್ಳವರಾಗಿದ್ದು, ಅಪಾರ ಪ್ರಮಾಣದಲ್ಲಿ ದಾನ ನೀಡುತ್ತಿದ್ದರು. ಹಜ್ ಮತ್ತು ಉಮ್ರಾ ನಿರ್ವಹಿಸಲು ಆಗದ ಬಹಳಷ್ಟು ಜನರಿಗೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಹಜ್ ಮತ್ತು ಉಮ್ರಾದ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದರು. ಅಲ್ಲದೆ ಮಕ್ಕಾದಲ್ಲಿ ಒಂದು ಮನೆಯನ್ನು ಬಾಡಿಗೆ ಪಡೆದು ಬಡ ಯಾತ್ರಿಗಳಿಗೆ ಉಳಿಯಲು ಅವಕಾಶ ಮಾಡಿಕೊಡುತ್ತಿದ್ದರು ಎಂದು ಮಾಹಿತಿ ನೀಡಿದರು.
ಹಲವು ಗಣ್ಯರು ಹಾಗೂ ಸಂಘಸಂಸ್ಥೆಗಳಿಂದ ಸಂತಾಪ: ಮುಝಫ್ಫರ್ ಕೋಲಾ ಸಮುದಾಯದ ಆಸ್ತಿಯಾಗಿದ್ದು, ಇವರ ಅಗಲಿಕೆಗೆ ಭಟ್ಕಳದ ಹಲವು ಗಣ್ಯರು ಹಾಗೂ ಸಂಘ-ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.