ಕೊರೋನ ನಿರ್ವಹಣೆಯಲ್ಲಿ 2,000 ಕೋಟಿ ರೂ. ಅವ್ಯವಹಾರ: ಸಿದ್ದರಾಮಯ್ಯ ಗಂಭೀರ ಆರೋಪ

ಬೆಂಗಳೂರು, ಜು.23: ಕೊರೊನ ನಿರ್ವಹಣೆಯಲ್ಲಿ ಎರಡು ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅವ್ಯವಹಾರವಾಗಿದ್ದು ಈ ಕುರಿತು ರಾಜ್ಯ ಸರಕಾರ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು. ಅಲ್ಲದೆ, ಈ ಬಗ್ಗೆ ಚರ್ಚಿಸಲು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಗುರುವಾರ ನಗರದ ಕ್ವೀನ್ಸ್‍ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19ರ ನಿಯಂತ್ರಣದ ಹಿನ್ನೆಲೆಯಲ್ಲಿ 4000 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಸರಕಾರ ವೆಚ್ಚ ಮಾಡಿದ್ದು, ಇದರಲ್ಲಿ 2000 ಕೋಟಿ ರೂ.ಗೂ ಹೆಚ್ಚು ಭ್ರಷ್ಟಾಚಾರ ನಡೆಸಿದೆ ಎಂದು ದೂರಿದರು.
ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸಿ 324 ಕೋಟಿ ರೂ.ಗಳನ್ನು ಮಾತ್ರ ಕೊರೋನ ಉಪಕರಣಗಳ ಖರೀದಿಗೆ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಪಾವತಿಸಿರುವ ಹಣದ ಬಗ್ಗೆ ಮಾತ್ರ ಅವರು ಮಾತನಾಡಿದ್ದಾರೆ. ಪಾವತಿ ಆಗಬೇಕಾದ ಹಣದ ಬಗ್ಗೆ ಬಾಯ್ಬಿಟ್ಟಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಪಾವತಿಸಿರುವ ಸಾಮಗ್ರಿಗಳಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅಧಿಕೃತ ಮಾಹಿತಿ ಪ್ರಕಾರ ವಿವಿಧ ಇಲಾಖೆಗಳಲ್ಲಿ 4167 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಖರೀದಿ ಆದೇಶಗಳನ್ನು ಮಾಡಿ ಹಣ ಪಾವತಿ ಮಾಡಬೇಕಾದ ಮೊತ್ತಕ್ಕೆ ಇನ್ನೂ ಲೆಕ್ಕ ಸಿಗಬೇಕಿದೆ. ಉಪ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಕ್ವಾರಂಟೈನ್ ಕೇಂದ್ರಗಳು, ಆಂಬ್ಯುಲೆನ್ಸ್ ಗಳು, ಪೌಷ್ಠಿಕ ಆಹಾರ, ಪರೀಕ್ಷೆ, ರೋಗ ಪತ್ತೆ ಮುಂತಾದವುಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಸಿದ್ದರಾಮಯ್ಯ ದೂರಿದರು.
ಕೊರೋನ ನಿರ್ವಹಣೆ ಸಂಬಂಧ ಮಾಡಿರುವ ವೆಚ್ಚದ ಬಗ್ಗೆ ಮಾಹಿತಿ ಕೋರಿ ಸುಮಾರು 20 ಪತ್ರಗಳನ್ನು ಸರಕಾರಕ್ಕೆ ಬರೆಯಲಾಗಿದೆ. ಇದುವರೆಗೂ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸುಮಾರು 85 ಲಕ್ಷ ಜನರಿಗೆ ಲಾಕ್‍ಡೌನ್ ಸಮಯದಲ್ಲಿ ಆಹಾರದ ಪ್ಯಾಕೇಟ್‍ಗಳನ್ನು ನೀಡಲಾಗಿದೆ. ಸುಮಾರು 5 ಲಕ್ಷ ಕಾರ್ಮಿಕರನ್ನು ರೈಲು ಮತ್ತು ಬಸ್ಸುಗಳಲ್ಲಿ ಆಹಾರದ ಪೊಟ್ಟಣಗಳನ್ನು ನೀಡಿ ಅವರ ಸ್ವಂತ ಊರುಗಳಿಗೆ ಕಳುಹಿಸಲಾಗಿದೆ. 2.80 ಲಕ್ಷ ಆಹಾರದ ಕಿಟ್‍ಗಳನ್ನು ವಿವಿಧ ಕ್ಷೇತ್ರಗಳ ಶಾಸಕರಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ, ಇವುಗಳಿಗೆ ಖರ್ಚಾದ ಹಣ ಎಷ್ಟು ಎಂಬ ಬಗ್ಗೆ ಸರಕಾರ ಮಾಹಿತಿ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ನಮಗಿರುವ ಮಾಹಿತಿ ಪ್ರಕಾರ, ವಿವಿಧ ಕಂಪನಿಗಳು ಮತ್ತು ಸೇವಾ ಸಂಸ್ಥೆಗಳು ನೀಡಿದ ಆಹಾರ ಮತ್ತು ಆಹಾರದ ಕಿಟ್‍ಗಳನ್ನು ತಾವು ನೀಡಿದ್ದೇವೆ ಎಂದು ಲೆಕ್ಕ ಬರೆದು ಹಣ ದೋಚಲಾಗಿದೆ. ಸರಕಾರದ ವಿವಿಧ ಇಲಾಖೆಗಳು ಖರ್ಚು ಮಾಡಿರುವ ನಾಲ್ಕು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಮಂತ್ರಿಗಳು ಮತ್ತು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ ಎಂದು ಅವರು ಆರೋಪಿಸಿದರು.
ವೆಂಟಿಲೇಟರ್: ಕೇಂದ್ರ ಸರಕಾರ ಸುಮಾರು 50 ಸಾವಿರ ವೆಂಟಿಲೇಟರ್ ಗಳನ್ನು ಪಿಎಂ ಕೇರ್ಸ್ ನಿಧಿಯಿಂದ ತಲಾ 4 ಲಕ್ಷ ರೂ.ಗಳಂತೆ ಒಟ್ಟು 2 ಸಾವಿರ ಕೋಟಿ ರೂ.ಗಳಲ್ಲಿ ಖರೀದಿ ಮಾಡಿ ಸರಬರಾಜು ಮಾಡುತ್ತಿದೆ. ತಮಿಳುನಾಡು ಸರಕಾರ ತಲಾ 4.78 ಲಕ್ಷ ರೂ.ಗಳಿಗೆ 100 ವೆಂಟಿಲೇಟರ್ ಗಳನ್ನು ಖರೀದಿಸಿದೆ. ನಮ್ಮ ರಾಜ್ಯ ಸರಕಾರ 5.6 ಲಕ್ಷ ರೂ.ಗಳಿಂದ 18.20 ಲಕ್ಷ ರೂ. ಹಣ ಕೊಟ್ಟು ವೆಂಟಿಲೇಟರ್ ಖರೀದಿ ಮಾಡಿದೆ ಎಂದು ಅವರು ದೂರಿದರು.
ಪಿಪಿಇ ಕಿಟ್: ಆರೋಗ್ಯ ಸಚಿವರ ಪ್ರಕಾರ, 9.65 ಲಕ್ಷ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ಪ್ಲಾಸ್ಟ್ ಸರ್ಜಿ ಎಂಬ ಕಂಪೆನಿಯೊಂದರಿಂದ ಸುಮಾರು 3.50 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿ ಮಾಡಿದ್ದಾರೆ. ಇವುಗಳು ಕಳಪೆ ದರ್ಜೆಯವು ಎಂದು ರಾಜ್ಯಾದ್ಯಂತ ತೀವ್ರ ಆರೋಪ ಬಂತು. ಅನೇಕ ಕಡೆ ವೈದ್ಯರು ಪ್ರತಿಭಟನೆಯನ್ನೂ ಮಾಡಿದರು ಎಂದು ಅವರು ತಿಳಿಸಿದರು.
ಈ ಕಂಪೆನಿಯಿಂದ ಎ.2ರಂದು ಸುಮಾರು 1 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿಸಿದ್ದಾರೆ. ಪಾವತಿಸಿರುವ ದರ ಕಿಟ್ ಒಂದಕ್ಕೆ 2,117.53 ರೂ.ಗಳು. ಇದೇ ಕಂಪನಿಗೆ 330 ರೂ.ಗಳನ್ನು ನೀಡಿಯೂ ಕಿಟ್‍ಗಳನ್ನು ಖರೀದಿ ಮಾಡಲಾಗಿದೆ. ಬಳ್ಳಾರಿ ವಿಮ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 1200 ರೂ.ಗಳ ವರೆಗೆ ನೀಡಿ ಪಿಪಿಇ ಕಿಟ್‍ಗಳನ್ನು ಖರೀದಿಸಿದ್ದಾರೆ ಎಂದು ಅವರು ತಿಳಿಸಿದರು.
ಮಾಸ್ಕ್: ಮಾಸ್ಕ್ ದರ ಮಾರುಕಟ್ಟೆಯಲ್ಲಿ 50-60 ರೂ. ಇದ್ದರೂ ಸುಮಾರು ಹತ್ತು ಲಕ್ಷ ಮಾಸ್ಕ್ ಗಳನ್ನು 126 ರೂ.ಗಳಿಂದ 150 ರೂ.ಗಳ ವರೆಗೆ ಖರೀದಿ ಮಾಡಲಾಗಿದೆ. ಇದರಲ್ಲಿ ನಿಯಮಬಾಹಿರವಾಗಿ ಹಾಗೂ ಕಳಪೆ ಗುಣಮಟ್ಟದ ಮಾಸ್ಕ್ ಗಳನ್ನು ಖರೀದಿ ಮಾಡಲಾಗಿದೆ ಎಂದು ಕಂದಾಯ ಇಲಾಖೆಯು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಥರ್ಮಲ್ ಸ್ಕ್ಯಾನರ್: ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಥರ್ಮಲ್ ಸ್ಕ್ಯಾನರ್ ಗಳು ಸುಮಾರು 2 ರಿಂದ 3 ಸಾವಿರ ರೂ.ಗಳಿದ್ದರೂ ಸರಕಾರದ ಆರೋಗ್ಯ ಇಲಾಖೆ 5945 ರೂ.ಗಳನ್ನು ನೀಡಿ ಖರೀದಿಸಿದೆ. ಇದೇ ಥರ್ಮಲ್ ಸ್ಕ್ಯಾನರ್ ಗಳನ್ನು ಸಮಾಜ ಕಲ್ಯಾಣ ಇಲಾಖೆಯು 9 ಸಾವಿರ ರೂ.ಗಳನ್ನು ನೀಡಿ ಖರೀದಿಸಿದೆ ಎಂದು ಅವರು ಆರೋಪಿಸಿದರು.
ಸ್ಯಾನಿಟೈಸರ್: 500 ಎಂಎಲ್ ಸ್ಯಾನಿಟೈಸರ್ ಗೆ ಮಾರುಕಟ್ಟೆಯಲ್ಲಿ 80-100 ರೂ.ಗಳಿದ್ದು ಇದಕ್ಕೆ 250 ರೂ. ನೀಡಿ ಖರೀದಿಸಿದ್ದಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯವರು ಇದೇ 500 ಎಂಎಲ್ ಬಾಟಲಿಗೆ 600 ರೂ.ಗಳನ್ನು ನೀಡಿದ್ದಾರೆ.
ಆಕ್ಸಿಜನ್ ಉಪಕರಣ: ಪಕ್ಕದ ಕೇರಳ ರಾಜ್ಯದಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊಳವೆ ಮೂಲಕ ಶ್ವಾಸಕೋಶಗಳಿಗೆ ಆಮ್ಲಜನಕ ಪೂರೈಕೆ ಮಾಡುವ ಸಾಧನಗಳನ್ನು (ಎಚ್.ಎಫ್.ಎನ್.ಸಿ. ಥೆರಪಿ ಡಿವೈಸ್) ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ 300 ಡಿವೈಸ್‍ಗಳ ದರ ಮತ್ತು ಕೇರಳ ಮೆಡಿಕಲ್ ಸರ್ವಿಸ್ ಕಾರ್ಪೋರೇಷನ್ ಖರೀದಿಸಿರುವ ದರದ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಕೇರಳದಲ್ಲಿ 2,86,961.18 ರೂಗಳಿಗೆ ಖರೀದಿಸಿದೆ. ಕರ್ನಾಟಕದಲ್ಲಿ 4,36,800 ರೂ.ಗಳಿಗೆ ಖರೀದಿಸಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರಕಾರ ಸ್ಯಾನಿಟೈಸರ್ ಗಳ ಮೇಲಿನ ಜಿಎಸ್‍ಟಿಯನ್ನು ಶೇ.12ರಿಂದ ಶೇ.18ಕ್ಕೆ ಏರಿಸಿ ಸಂಕಷ್ಟದ ಸಮಯದಲ್ಲೂ ಜನರನ್ನು ಶೋಷಿಸಲು ಯತ್ನಿಸುತ್ತಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸರಕಾರ, ಸ್ಯಾನಿಟೈಸರ್ ಗಳನ್ನು ಖರೀದಿ ಮಾಡಿದ್ದಕ್ಕಿಂತ ಸಿಎಸ್‍ಆರ್ ನ ದೇಣಿಗೆ ನೀಡಿರುವ ಪ್ರಮಾಣವೇ ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಆರೋಗ್ಯ ಇಲಾಖೆಯಿಂದ ಖರ್ಚು ಮಾಡಿರುವ ಒಟ್ಟು ಪ್ರಮಾಣ 3,500 ಕೋಟಿ ರೂ.ಗಳು. ಇದು ಸರಕಾರದ ಅಧಿಕೃತ ಮಾಹಿತಿ. ಬಿಡುಗಡೆ ಮಾಡಿರುವುದು 1527 ಕೋಟಿ ರೂ. ಬಿಡುಗಡೆ ಮಾಡಿರುವುದಕ್ಕಿಂತ ಶೇ.217 ರಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಇದೆ. ಇದರ ಜೊತೆಗೆ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ 133 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇದು ಒಂದು ಇಲಾಖೆಯ ಮಾಹಿತಿ ಮಾತ್ರ ಎಂದು ಅವರು ಹೇಳಿದರು.
ಸಂಪನ್ಮೂಲಗಳ ಕೊರತೆಯ ನೆಪದಲ್ಲಿ ಸರಕಾರದ ಆಸ್ತಿ ಹರಾಜು ಹಾಕುತ್ತಿದ್ದಾರೆ. ಗುತ್ತಿಗೆಗೆ ನೀಡಿರುವ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ, 8 ಸಾವಿರ ಕೋಟಿ ರೂ. ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಸಾಲ ಮಾಡಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.








