ಪುತ್ತೂರು: ಸಂಚಾರ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ನಿಧನ

ಪುತ್ತೂರು: ನಗರದ ಸಂಚಾರ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಉಮೇಶ್ (47) ಅನಾರೋಗ್ಯದ ಕಾರಣದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸುಳ್ಯ ತಾಲೂಕಿನ ಬಾಳಿಲ ಮುಪ್ಪೇರಿಯಾ ನಿವಾಸಿಯಾದ ಇವರು ಮಂಗಳೂರು, ಬಂಟ್ವಾಳ ಗ್ರಾಮಾಂತರ, ಸುಬ್ರಹ್ಮಣ್ಯ, ಬೆಳ್ಳಾರೆ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೊರೋನ ಸಂದರ್ಭ ಪ್ರಥಮ ಹಂತದ ಲಾಕ್‍ಡೌನ್ ಕೊನೆಯವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಅನಾರೋಗ್ಯದ ಕಾರಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಉಮೇಶ್ ಅವರ ಮೃತದೇಹವನ್ನು ಗುರುವಾರ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ತರಲಾಯಿತು. ಇಲಾಖಾ ಸಿಬಂದಿ ಮತ್ತು ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು. ಪುತ್ತೂರು ಮಹಿಳಾ ಪೊಲೀಸ್ ಠಾಣಾ ಇನ್ಸ್‍ಪೆಕ್ಟರ್ ಕುಸುಮಾಧರ, ಸಂಚಾರ ಪೊಲೀಸ್ ಠಾಣಾ ಎಸ್.ಐ. ಚೆಲುವಯ್ಯ, ಪುತ್ತೂರು ನಗರ ಠಾಣಾ ಎಸ್.ಐ. ಜಂಬೂರಾಜ್ ಮಹಾಜನ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಎಸ್.ಐ. ಉದಯರವಿ, ಕಡಬ ಪೊಲೀಸ್ ಠಾಣಾ ಎಸ್.ಐ. ರುಕ್ಮ ನಾಯ್ಕ್, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಭಾಮಿ ಅಶೋಕ್ ಶೆಣೈ, ಪಿ.ಜಿ. ಜಗನ್ನಿವಾಸ್ ರಾವ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು. ಮೃತದೇಹವನ್ನು ಹುಟ್ಟೂರು ಬಾಳಿಲಕ್ಕೆ ಕೊಂಡೊಯ್ದು ಪೊಲೀಸ್ ಗೌರವದೊಂದಿಗೆ ಅಂತ್ಯ ಸಂಸ್ಕಾರಗಳನ್ನು ನಡೆಸಲಾಯಿತು.







