ತುರ್ತು ಶಸ್ತ್ರಕ್ರಿಯೆ ಅಗತ್ಯವಿದ್ದ ರೋಗಿಗೆ ರಕ್ತದಾನ ಮಾಡಿ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಫವಾಝ್

ಹೊಸದಿಲ್ಲಿ: ರಾಜಧಾನಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಇಲ್ಲಿನ 24 ವರ್ಷದ ಕಿರಿಯ ವೈದ್ಯ ಡಾ. ಮುಹಮ್ಮದ್ ಫವಾಝ್ ಅವರು ಗಂಭೀರ ಸ್ಥಿತಿಯಲ್ಲಿದ್ದ ಹಾಗೂ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದ್ದ ರೋಗಿಯೊಬ್ಬರಿಗೆ ರಕ್ತದಾನ ಮಾಡಿ, ಶಸ್ತ್ರಚಿಕಿತ್ಸೆಯನ್ನೂ ನಡೆಸಿದ್ದಾರೆ. ರೋಗಿ ಸೆಪ್ಟಿಕ್ ಶಾಕ್ ಸಮಸ್ಯೆ ಅನುಭವಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಡಾ. ಫವಾಝ್ ಅವರು ಆಸ್ಪತ್ರೆಯ ಸರ್ಜರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ರೋಗಿಯೊಬ್ಬರು ತಮ್ಮ ಪತ್ನಿಯ ಜತೆಗೆ ಬಂದಿದ್ದು ಆ ವ್ಯಕ್ತಿಯ ಕಾಲಿಗೆ ಉಂಟಾದ ಆಳ ಗಾಯದಿಂದಾಗಿ ಸೆಪ್ಟಿಕ್ ಶಾಕ್ ನಿಂದ ಬಳಲುತ್ತಿದ್ದರಲ್ಲದೆ ಸೋಂಕು ಇಡೀ ಕಾಲಿಗೆ ಹರಡಿ ರೋಗಿಗೆ ತಕ್ಷಣ ಶಸ್ತ್ರಕ್ರಿಯೆ ನೆರವೇರಿಸಬೇಕಿತ್ತು. ಅವರಿಗೆ ತಕ್ಷಣ ರಕ್ತ ಕೂಡ ಅಗತ್ಯವಿದ್ದರೂ ಆತನ ಸಂಬಂಧಿಕರ್ಯಾರಿಗೂ ಆಸ್ಪತ್ರೆಗೆ ತಕ್ಷಣ ಬರುವುದು ಸಾಧ್ಯವಾಗಿರಲಿಲ್ಲ.
ಕೊನೆಗೆ ಡಾ. ಫವಾಝ್ ಮುಂದೆ ಬಂದು ರಕ್ತದಾನ ಮಾಡಿ ರೋಗಿಗೆ ನೆರವಾಗಿದ್ದಾರೆ. ನಂತರ ವೈದ್ಯರ ತಂಡದ ಜೊತೆ ಶಸ್ತ್ರಚಿಕಿತ್ಸೆಯನ್ನೂ ನಡೆಸಿದ್ದಾರೆ. ರೋಗಿಯ ಪತ್ನಿ ಜತೆಗಿದ್ದರೂ ಆಕೆ ರಕ್ತದಾನ ಮಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ಡಾ. ಫವಾಝ್ ಹೇಳಿದ್ದಾರೆ.





