ದರೋಡೆಗೆ ಸಂಚು ಆರೋಪ: 6 ರೌಡಿಶೀಟರ್ ಗಳ ಬಂಧನ

ಬೆಂಗಳೂರು, ಜು.23: ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಸಂಚು ರೂಪಿಸಿದ್ದ ಆರೋದಪಡಿ 6 ಮಂದಿ ರೌಡಿಶೀಟರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಸುಭೇದಾರ್ ಪಾಳ್ಯ 3ನೆ ಕ್ರಾಸ್‍ನ ರವಿಶಂಕರ್(28), ಯಲಹಂಕದ ರಾಮಗೊಂಡನಹಳ್ಳಿಯ ಶರತ್ ಬಾಬು(24), ಯಲಹಂಕದ ಯಲಚೇತನಹಳ್ಳಿಯ ದೀಪಕ್ ಕುಮಾರ್(20), ಯಲಹಂಕ ಅಟ್ಟೂರ್ ಲೇಔಟ್‍ನ ಕೀರ್ತಿ ರಾಜ್(22), ಸಂತೋಷ್ (22) ಹಾಗೂ ಅನಂತಪುರದ ಗಿಲ್ಬರ್ಟ್(21) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ರವಿಶಂಕರ್ ಬಾಣಸವಾಡಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ರಾಮಮೂರ್ತಿನಗರ, ಯಲಹಂಕ ನ್ಯೂಟೌನ್, ಬಾಣಸವಾಡಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಶರತ್ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಒಂದು ಹಲ್ಲೆ ಪ್ರಕರಣ, ದೀಪಕ್, ಕೀರ್ತಿ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆಯತ್ನ ಪ್ರಕರಣ ದಾಖಲಾಗಿವೆ.
ಆರೋಪಿಗಳು ಯಲಹಂಕ ಉಪ ನಗರದ ನಿರ್ಜನ ಪ್ರದೇಶದಲ್ಲಿ ಸಾರ್ವ ಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಇವರಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಲಾಗಿದೆ.







