ಕಿರ್ಗಿಸ್ತಾನದಲ್ಲಿ ಸಿಲುಕಿದ 1,500 ವಿದ್ಯಾರ್ಥಿಗಳನ್ನು ಕರೆತರಲು ಸ್ಪೈಸ್ ಜೆಟ್ ಜೊತೆ ಕೈ ಜೋಡಿಸಿದ ಸೋನು ಸೂದ್

ಹೊಸದಿಲ್ಲಿ, ಜು. 23: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ಸಂದರ್ಭ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಾಯ್ನಾಡಿಗೆ ಮರಳಲು ನೆರವು ನೀಡಿದ್ದ ನಟ ಸೋನು ಸೂದ್ ಕಿರ್ಗಿಸ್ತಾನದಿಂದ 1,500 ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತರಲು ಸ್ಪೈಸ್ ಜೆಟ್‌ನೊಂದಿಗೆ ಕೈಜೋಡಿಸಿದ್ದಾರೆ.
ಈ ಮಾಹಿತಿಯನ್ನು ಸ್ಪೈಸ್ ಜೆಟ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಇಂತಹ 9 ವಿಮಾನಗಳು ಸಂಚಾರ ಆರಂಭಿಸಲಿವೆ. ಮೊದಲ ವಿಮಾನ ಇಂದು ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ ಎಂದು ಅದು ತಿಳಿಸಿದೆ. ಇಂದು ಚಾರಿತ್ರಿಕ ದಿನ. ನಿಜ ಬದುಕಿನ ಹೀರೊ ಸೋನು ಸೂದ್ ಕಝಕಿಸ್ತಾನದಲ್ಲಿ ಸಿಲುಕಿರುವ 1,500 ಭಾರತೀಯ ವಿದ್ಯಾರ್ಥಿಗಳನ್ನು ತಮ್ಮ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ಸ್ಥಳಾಂತರಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ. 9 ವಿಶೇಷ ವಿಮಾನಗಳಲ್ಲಿ ಮೊದಲ ವಿಮಾನ ದಿಲ್ಲಿಯಿಂದ ನಿರ್ಗಮಿಸಿದೆ ಎಂದು ಸ್ಪೈಸ್ ಜೆಟ್ ಟ್ವೀಟ್ ಮಾಡಿದೆ.
ಈ ಹಿಂದೆ ಸೋನು ಸೂದ್ ಲಾಕ್‌ಡೌನ್ ಸಂದರ್ಭ ಬಸ್ ವ್ಯವಸ್ಥೆ ಏರ್ಪಡಿಸಿ ವಲಸೆ ಕಾರ್ಮಿಕರನ್ನು ತಮ್ಮ ತಾಯ್ನೆಡಿಗೆ ಕಳುಹಿಸಿರುವುದಲ್ಲದೆ, ಮಹಿಳೆಯರು, ಮಕ್ಕಳು ಸೇರಿದಂತೆ 300ಕ್ಕೂ ಅಧಿಕ ಜನರನ್ನು ಅಸ್ಸಾಂ ಹಾಗೂ ಡೆಹ್ರಾಡೂನ್‌ಗೆ ಕಳುಹಿಸಲು ವಿಮಾನ ಹಾರಾಟ ಏರ್ಪಡಿಸಲು ನೆರವಾಗಿದ್ದರು.





