ಉಡುಪಿ: ಅಂತರ ಜಿಲ್ಲಾ ಬಸ್ ಸೇವೆ ಆರಂಭ; ಪ್ರಯಾಣಿಕರದ್ದೇ ಕೊರತೆ

ಉಡುಪಿ, ಜು.23: ಉಡುಪಿ ಜಿಲ್ಲೆಯಲ್ಲಿ ಸೀಲ್‌ಡೌನ್ ಕೊನೆಗೊಳ್ಳುತ್ತಿ ರುವಂತೆ ಗುರುವಾರ ಅಂತರ ಜಿಲ್ಲಾ ಸಾರಿಗೆ ಸಂಚಾರ ಮತ್ತೆ ಆರಂಭಗೊಂಡಿದೆ. ಕೆಎಸ್ಸಾರ್ಟಿಸಿ, ಸಿಟಿ, ಖಾಸಗಿ ಸರ್ವೀಸ್ ಮತ್ತು ಎಕ್ಸ್‌ಪ್ರೆಸ್ ಬಸ್ಸುಗಳು ವಿವಿಧ ಮಾರ್ಗಗಳಲ್ಲಿ ತಮ್ಮ ನಿಗದಿತ ಸಂಚಾರ ನಡೆಸುತ್ತಿವೆ.
ಇಂದು ಉಡುಪಿಯಿಂದ ಮಂಗಳೂರಿಗೆ 20, ಕುಂದಾಪುರಕ್ಕೆ 22, ಶಿವಮೊಗ್ಗ ಕ್ಕೆ 4, ಹೆಬ್ರಿಗೆ 6, ಕಾರ್ಕಳಕ್ಕೆ 7 ಬಸ್ಸುಗಳು ಓಡಾಟ ನಡೆಸಿವೆ. ಜಿಲ್ಲೆಯೊಳಗೆ 12 ಸರ್ವೀಸ್ ಬಸ್ಸುಗಳು ಹಾಗೂ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 20 ಸಿಟಿ ಬಸ್ಸುಗಳು ಓಡಾಟ ನಡೆಸಿವೆ. ನಾಳೆ ಇನ್ನೂ 10 ಬಸ್ಸು ರಸ್ತೆಗಳಿದು ಸಂಚಾರ ಪ್ರಾರಂಭಿಸಲಿವೆ ಎಂದು ತಿಳಿದುಬಂದಿದೆ.
ಕಾರ್ಕಳ -ಪಡುಬಿದ್ರೆ-ಮಂಗಳೂರು, ಕಾರ್ಕಳ ಮೂಡಬಿದಿರೆ-ಮಂಗಳೂರು ಮಾರ್ಗಗಳಲ್ಲಿ ಎರಡೆರಡರಂತೆ ಖಾಸಗಿ ಬಸ್‌ಗಳು ಓಡಾಟ ನಡೆಸಿವೆ. ಹೆಬ್ರಿ, ಕಾರ್ಕಳ, ಕುಂದಾಪುಗಳಲ್ಲೂ ಸಾಕಷ್ಟು ಬಸ್ ಸಂಚರಿಸಿರುವ ವರದಿ ಬಂದಿದೆ. ಜನರ ನೀರಸ ಪ್ರತಿಕ್ರಿಯೆ: ಕೊರೋನಾ ಸೋಂಕಿನ ಭೀತಿಯಿಂದ ಬಸ್‌ಗಳಲ್ಲಿ ಸಂಚರಿಸಲು ಪ್ರಯಾಣಿಕರು ಉತ್ಸಾಹ ತೋರದಿರುವುದು ಬಸ್ ಮಾಲಕರು ಹಾಗೂ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇಂದು ಸಂಚರಿಸಿದ ಹೆಚ್ಚಿನ ಬಸ್‌ಗಳು ಖಾಲಿಯಾಗಿ ಓಡಾಟ ನಡೆಸಿವೆ ಎಂದು ಬಸ್ ಸಿಬ್ಬಂದಿಗಳು ಬೇಸರದಿಂದ ನುಡಿಯುತ್ತಾರೆ.
ಬಸ್‌ಗಳಲ್ಲಿ ಮಾಸ್ಕ್ ಧರಿಸುವುದು, ಸುರಕ್ಷತಾ ಅಂತರಕ್ಕೆ ಪ್ರಾಶಸ್ತ್ಯ ನೀಡಿದ್ದರೂ, ಬಸ್‌ಗಳನ್ನು ಸ್ಯಾನಟೈಸ್ ಮಾಡುತ್ತಿರುವ ಬಗ್ಗೆ ಭರವಸೆ ನೀಡಿದರೂ, ಜನರ ಕೊರೋನ ಭೀತಿ ಕಡಿಮೆಯಾಗಿಲ್ಲ. ಈ ಸ್ಥಿತಿ ಸುಧಾರಿಸಿ, ಮತ್ತೆ ಜನ ಸಂಚರಿಸುವ ಧೈರ್ಯ ತೋರಿಸಲು ತುಂಬಾ ಸಮಯ ಬೇಕಾಗಬಹುದು ಎಂಬ ಚಿಂತೆಯನ್ನು ಬಸ್‌ಗಳ ಚಾಲಕರು, ನಿರ್ವಾಹಕರು ವ್ಯಕ್ತಪಡಿಸುತ್ತಾರೆ.
ಕೆಎಸ್ಸಾರ್ಟಿಸಿ: ಕೆಎಸ್ಸಾರ್ಟಿಸಿ ಉಡುಪಿ ಡಿಪೋದಿಂದ ಕಾರ್ಕಳ, ಕುಂದಾಪುರ, ಹೆಬ್ರಿ, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು, ಹಾವೇರಿ, ಚಿಕ್ಕಮಗಳೂರು, ಬೆಂಗಳೂರು, ಭಟ್ಕಳ ಭಾಗಗಳಿಗೆ ಬಸ್ಸುಗಳು ತೆರಳುತ್ತಿವೆ. ಒಟ್ಟು 21 ಬಸ್ಸುಗಳು ಸದ್ಯಕ್ಕೆ ಓಡಾಟ ಮಾಡುತ್ತಿವೆ. ನಾಳೆ ಇನ್ನೂ 10-12 ಬಸ್ಸುಗಳು ಓಡಲಿವೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ನರ್ಮ್ ಬಸ್‌ಗಳ ಬದಲು ಕೆಎಸ್ಸಾರ್ಟಿಸಿ ಬಸ್ಸುಗಳು ಸಂಚಾರ ನಡೆಸುತ್ತಿವೆ. ನರ್ಮ್ ಬಸ್ಸುಗಳಲ್ಲಿ ಕೋವಿಡ್-19ಗೆ ಸಂಬಂಧಿಸಿದ ಸುರಕ್ಷತಾ ಅಂತರ ನಿಯಮ ಪಾಲನೆ ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿಯ 7 ಬಸ್ಸುಗಳನ್ನು ಹಾಕಲಾಗಿದೆ. ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಉಡುಪಿ ಡಿಪೋ ಮ್ಯಾನೇಜರ್ ಉದಯಕುಮಾರ್ ಶೆಟ್ಟಿ ನುಡಿದರು.
ಪೇಟೆ, ಬೀದಿಗಳೂ ಖಾಲಿಖಾಲಿ
ಕೊರೋನ ಸೋಂಕು ಹರಡುವ ಭೀತಿಯಿಂದ ಜನ ಮನೆಯಿಂದ ಹೊರಗೆ ಬರಲು ಹೆದರುತಿದ್ದಾರೆ. ಹೀಗಾಗಿ ದಿನದ ಅಧಿಕ ಅವಧಿಯಲ್ಲಿ ಉಡುಪಿ ನಗರದ ಪೇಟೆ, ಬೀದಿಗಳೆಲ್ಲವೂ ನಿರ್ಜನವಾಗಿರುತ್ತವೆ. ಹಿಂದೆಲ್ಲಾ ಜನರಿಂದ ಕಿಕ್ಕಿರಿದು ನರೆದಿರುತಿದ್ದ ಕೆಲವು ಪ್ರದೇಶಗಲ್ಲಿ ಈಗ ಜನರ ಸುಳಿವೇ ಕಾಣುತ್ತಿಲ್ಲ.
ಜನರಲ್ಲಿ ಆವರಿಸಿರುವ ಸೋಂಕಿನ ಭೀತಿ ಇನ್ನು ದೂರವಾಗಿಲ್ಲ. ಹೀಗಾಗಿ ಅಗತ್ಯ ಸೇವೆಗಳಿಗೆ ಮಾತ್ರ ಜನರು ಪೇಟೆಗೆ ಬರುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು ತಮ್ಮ ಸ್ವಂತ ದ್ವಿಚಕ್ರ ವಾಹನ, ಕಾರುಗಳಲ್ಲಿ ಪೇಟೆಗೆ ಬಂದು, ಕೆಲಸ ಮುಗಿಸಿ, ಹೆಚ್ಚು ಹೊತ್ತು ನಿಲ್ಲದೆ ಮರಳುತ್ತಿರುವುದರಿಂದ ಪೇಟೆಗಳೆಲ್ಲ ಹಿಂದಿನ ಲವಲವಿಕೆ ಕಳೆದುಕೊಂಡಿವೆ ಎಂದು ವ್ಯಾಪಾರಿಗಳು ಜನರಿಲ್ಲದ ಬೀದಿಗಳತ್ತ ದೃಷ್ಟಿ ನೆಟ್ಟು ನುಡಿಯುತ್ತಾರೆ.







