ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ: ಅಂತರ್ ರಾಜ್ಯ ಗಡಿ ಮುಚ್ಚಿದ ಕೇರಳ ಸರಕಾರ

ತಿರುವನಂತಪುರ, ಜು. 23: ರಾಜ್ಯದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುತ್ತಿರುವುದರಿಂದ ಜನರು ಅನಗತ್ಯವಾಗಿ ಪ್ರಯಾಣಿಸುವುದನ್ನು ತಡೆಯಲು ಕೇರಳ ಸರಕಾರ ತನ್ನ ಅಂತರ್ ರಾಜ್ಯ ಗಡಿಗಳನ್ನು ಗುರುವಾರ ಮುಚ್ಚಿದೆ.
ಇತ್ತೀಚೆಗಿನ ದಿನಗಳಲ್ಲಿ ರಾಜ್ಯದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ವಿಪರೀತವಾಗಿ ಏರಿಕೆಯಾಗುತ್ತಿರುವುದರಿಂದ ಕೇರಳ-ತಮಿಳುನಾಡು ಹಾಗೂ ಕೇರಳ-ಕರ್ನಾಟಕ ಗಡಿಯಲ್ಲಿ ಜನರಿಗೆ ಕೇವಲ ಆಯ್ದ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಕೇರಳದಲ್ಲಿ ಬುಧವಾರ 1038 ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಜಾರಿಗೊಳಿಸುವಂತೆ ಚಿಂತಿಸಲು ಸರಕಾರವನ್ನು ಪ್ರೇರೇಪಿಸಿದೆ.
ಕೇರಳದಲ್ಲಿ ಬುಧವಾರ ಮೊದಲ ಬಾರಿಗೆ ಕೊರೋನ ಸೋಂಕಿತರ ಸಂಖ್ಯೆ 4 ಅಂಕೆಗೆ ಏರಿಕೆಯಾಗಿದೆ. ಇದರಲ್ಲಿ 785 ಪ್ರಕರಣಗಳು ಸ್ಥಳೀಯ ಸಂಪರ್ಕದಿಂದ ಬಂದಿವೆ. ಆದರೆ, 57 ಪ್ರಕರಣಗಳ ಮೂಲ ತಿಳಿದಿಲ್ಲ. ಇತರ ರಾಜ್ಯಗಳಿಂದ ಆಗಮಿಸಿದ 109ಕ್ಕೂ ಅಧಿಕ ಜನರಿಗೆ ಕೊರೋನ ಸೊಂಕು ಇದೆ. ‘‘ವೈದ್ಯಕೀಯ ತುರ್ತು ಇರುವವರು ಹಾಗೂ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ರಾಜ್ಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಇಂತಹ ವ್ಯಕ್ತಿಗಳು ರಾಜ್ಯಕ್ಕೆ ಪ್ರಯಾಣಿಸುವ ಮೊದಲು ಕೋವಿಡ್-19 ಜಾಗೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡುವ ಅಗತ್ಯ ಇದೆ’’ ಎಂದು ಪೊಲೀಸ್ ವರಿಷ್ಠ ಲೋಕನಾಥ್ ಬೆಹೆರಾ ತಿಳಿಸಿದ್ದಾರೆ.







