ಎರಡೂ ಪಕ್ಷಗಳಿಂದ ಬೇಜವಾಬ್ದಾರಿ ವರ್ತನೆ: ಬಿಜೆಪಿ, ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅಕ್ರಮ ಆರೋಪ

ಬೆಂಗಳೂರು, ಜು. 23: 'ಕೋರೋನ ನಿಯಂತ್ರಣ ಸಂಬಂಧ ವೈದ್ಯಕೀಯ ಪರಿಕರಗಳ ಖರೀದಿ ಅಕ್ರಮದ ಬಗೆಗಿನ ಅತ್ಯಂತ ಹಳೇ ರಾಷ್ಟ್ರೀಯ ಪಕ್ಷವೊಂದರ ಆರೋಪ, ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಪ್ರತ್ಯಾರೋಪ, ಕೆಸರೆರಚಾಟವನ್ನು ಗಮನಿಸಿದೆ. ಕೋವಿಡ್-19 ಈ ರಾಜ್ಯದ ಪ್ರತಿಯೊಬ್ಬನ ಜೀವ, ಜೀವನಕ್ಕೆ ಬೆದರಿಕೆಯೊಡ್ಡಿರುವಾಗ, ಬದುಕನ್ನೇ ಕಸಿಯುತ್ತಿರುವಾಗ ಎರಡೂ ಪಕ್ಷಗಳ ಬೇಜವಾಬ್ದಾರಿ ವರ್ತನೆ ಕಂಡು ಬೇಸರವಾಗಿದೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ಕೋವಿಡ್-19 ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿರುವುದು ನಿಜವೇ ಆಗಿದ್ದರೆ, ಅದು ಆಡಳಿತ ಪಕ್ಷದ ನೈತಿಕತೆಯೇ ಇಲ್ಲದ, ಮನುಷ್ಯತ್ವ ಹೀನ ಕೃತ್ಯವೇ ಸರಿ. ಕೇವಲ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹಳೇ ರಾಷ್ಟ್ರೀಯ ಪಕ್ಷ ಮತ್ತು ಅದರ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಅದು ಆ ನಾಯಕರ ರಾಜಕೀಯ ದಾಹದ ಪ್ರತೀಕ' ಎಂದು ಲೇವಡಿ ಮಾಡಿದ್ದಾರೆ.
'ಹಳೇ ಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ಮೊದಲು ಕೆಸರೆರಚಾಟ ನಿಲ್ಲಿಸಬೇಕು. ನಮ್ಮ ಆದ್ಯತೆ ಜನರ ಜೀವ ಮತ್ತು ಜೀವನವಾಗಬೇಕು. ಮುಖ್ಯಮಂತ್ರಿ ಈ ಬಗ್ಗೆ ಸೂಕ್ತ ಸ್ಪಷ್ಟನೆ ನೀಡಿ, ಪರಿಣಾಮಕಾರಿಯಾಗಿ ಕೋವಿಡ್-19 ಅನ್ನು ನಿಗ್ರಹಿಸುವತ್ತ ಗಮನಹರಿಸಬೇಕು. ಕೋವಿಡ್ ನಿಗ್ರಹಿಸುವುದಕ್ಕೆ ನಮ್ಮ ಬೆಂಬಲ. ನಿಮ್ಮ ಕ್ಷುಲ್ಲಕ ನಡವಳಿಕೆಗಳಿಗಲ್ಲ' ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.





