ಮಂಗಳ ಶೋಧಕ ನೌಕೆಯನ್ನು ಉಡಾಯಿಸಿದ ಚೀನಾ
ವೆನ್‌ಚಂಗ್ (ಚೀನಾ), ಜು. 23: ಮಂಗಳ ಶೋಧಕ ನೌಕೆ ‘ತಿಯಾನ್‌ವೆನ್-1’ನ್ನು ಚೀನಾ ಗುರುವಾರ ದಕ್ಷಿಣದ ಹೈನಾನ್ ದ್ವೀಪದಿಂದ ಉಡಾಯಿಸಿದೆ.
ಚೀನೀ ಭಾಷೆಯಲ್ಲಿ ‘ಆಕಾಶಕ್ಕೆ ಪ್ರಶ್ನೆಗಳು’ ಎಂಬ ಅರ್ಥವನ್ನು ಹೊಂದಿದ ಶೋಧಕ ನೌಕೆಯನ್ನು ಹೊತ್ತ ಚೀನಾದ ಅತಿ ದೊಡ್ಡ ಬಾಹ್ಯಾಕಾಶ ರಾಕೆಟ್ ‘ಲಾಂಗ್ ಮಾರ್ಚ್ 5’ ಆಕಾಶಕ್ಕೆ ಚಿಮ್ಮಿದಾಗ ಎಂಜಿನಿಯರ್‌ಗಳು ಮತ್ತು ಇತರ ಉದ್ಯೋಗಿಗಳು ಸಂಭ್ರಮಿಸಿದರು.
ಮಂಗಳ ಶೋಧಕ ನೌಕೆಯ ಉಡ್ಡಯನವು ಯಶಸ್ವಿಯಾಗಿದೆ ಎಂಬುದಾಗಿ ಸೈಟ್ ಕಮಾಂಡರ್ ಝಾಂಗ್ ಕ್ಸುಯೆಯು ಬಳಿಕ ಸರಕಾರಿ ಟಿವಿ ಸಿಸಿಟಿವಿಯಲ್ಲಿ ಘೋಷಿಸಿದರು.
5 ಟನ್ ಭಾರದ ತಿಯಾನ್‌ವೆನ್-1 ನೌಕೆಯು 5.5 ಕೋಟಿ ಕಿಲೋಮೀಟರ್ ದೂರವನ್ನು ಏಳು ತಿಂಗಳು ಕ್ರಮಿಸಿದ ಬಳಿಕ 2021ರ ಫೆಬ್ರವರಿಯಲ್ಲಿ ಮಂಗಳ ಗ್ರಹದಲ್ಲಿ ಇಳಿಯುತ್ತದೆ ಎಂದುದ ನಿರೀಕ್ಷಿಸಲಾಗಿದೆ.
ಚೀನಾದ ಈ ಮಂಗಳ ಯೋಜನೆಯು ಗ್ರಹದ ಕಕ್ಷೆಯಲ್ಲಿ ತಿರುಗುವ ಆರ್ಬಿಟರ್, ಗ್ರಹದ ಮೇಲೆ ಇಳಿಯುವ ಲ್ಯಾಂಡರ್ ಮತ್ತು ಗ್ರಹದ ಮೇಲೆ ಚಲಿಸುವ ರೋವರ್ (ಶೋಧಕ)ವನ್ನು ಹೊಂದಿದೆ. ಶೋಧಕವು ಮಂಗಳ ಗ್ರಹಮ ಮಣ್ಣನ್ನು ಪರೀಕ್ಷಿಸುತ್ತದೆ.
ಮಂಗಳ ಗ್ರಹವು ಭೂಮಿಯ ಅತಿ ಸನಿಹಕ್ಕೆ ಬಂದಿರುವ ಅವಕಾಶವನ್ನು ಚೀನಾ, ಅಮೆರಿಕ ಮತ್ತು ಯುಎಇಗಳು ಬಳಸಿಕೊಂಡಿವೆ. ಯುಎಇಯು ಮಂಗಳ ಶೋಧಕ ನೌಕೆಯೊಂದನ್ನು ಸೋಮವಾರ ಜಪಾನ್‌ನ ದ್ವೀಪವೊಂದರಿಂದ ಯಶಸ್ವಿಯಾಗಿ ಉಡಾಯಿಸಿದೆ. ಜುಲೈ 30ರಂದು ತನ್ನ ಮಂಗಳ ಶೋಧಕ ನೌಕೆಯನ್ನು ಉಡಾಯಿಸಲು ಅಮೆರಿಕವು ಸಿದ್ಧತೆಗಳನ್ನು ನಡೆಸುತ್ತಿದೆ.
ಇದು ಚೀನಾದ ಮೊದಲ ಯಶಸ್ವಿ ಮಂಗಳ ಯೋಜನೆಯಾಗಿದೆ. 2011ರಲ್ಲಿ ಅದು ರಶ್ಯದ ಜೊತೆಗೆ ಮಂಗಳಕ್ಕೆ ಶೋಧಕ ನೌಕೆಯನ್ನು ಕಳುಹಿಸುವ ಯೋಜನೆಯನ್ನು ರೂಪಿಸಿತ್ತಾದರೂ, ಅದು ಉಡ್ಡಯನ ಹಂತದಲ್ಲೇ ವಿಫಲವಾಗಿತ್ತು.
ಚಂದ್ರನಲ್ಲಿಗೆ 2 ಶೋಧಕಗಳು
ಚೀನಾ ಈಗಾಗಲೇ ಚಂದ್ರನಲ್ಲಿಗೆ ಎರಡು ಶೋಧಕಗಳನ್ನು ಕಳುಹಿಸಿದೆ. ಎರಡನೇ ಶೋಧಕವನ್ನು ಚಂದ್ರನ ಇನ್ನೊಂದು ಬದಿಯಲ್ಲಿ ಸರಾಗವಾಗಿ ಇಳಿಸುವ ಮೂಲಕ, ಈ ಸಾಧನೆಯನ್ನು ಮಾಡಿದ ಮೊದಲ ದೇಶವಾಗಿ ಅದು ಹೊರಹೊಮ್ಮಿದೆ.







