ಯುಎಪಿಎ ಕಾಯ್ದೆ ಉಲ್ಲೇಖಿಸಿ ಗ್ರೇಟಾ ತನ್ ಬರ್ಗ್ ನಂಟು ಹೊಂದಿರುವ ವೆಬ್‌ಸೈಟ್‌ಗೆ ನಿರ್ಬಂಧ ವಿಧಿಸಿದ ದಿಲ್ಲಿ ಪೊಲೀಸರು
ಕರಡು ಪರಿಸರ ಕಾಯ್ದೆ ವಿರುದ್ಧ ಅಭಿಯಾನ

ಹೊಸದಿಲ್ಲಿ, ಜು. 23: ಪರಿಸರ ಸಚಿವಾಲಯ ಮಾರ್ಚ್ 23ರಂದು ಜಾರಿಗೊಳಿಸಿದ ಕರಡು ಪರಿಸರ ಪರಿಣಾಮ ಅಂದಾಜು (ಇಐಎ) ಅಧಿಸೂಚನೆ-2020 ವಿರೋಧಿಸಿ ಅಭಿಯಾನ ನಡೆಸುತ್ತಿದ್ದ ಹವಾಮಾನ ಬದಲಾವಣೆ ಹೋರಾಟಗಾರ್ತಿ ಗ್ರೇಟಾ ತನ್ ಬರ್ಗ್ ನಂಟು ಹೊಂದಿರುವ ‘ಫ್ರೈಡೆ ಫಾರ್ ಫ್ಯೂಚರ್’ ವೆಬ್‌ಸೈಟ್‌ನ ಭಾರತೀಯ ಘಟಕದ ಸ್ಥಳೀಯ ನಿರೂಪಕನಿಗೆ ದಿಲ್ಲಿ ಪೊಲೀಸರು ನೋಟಿಸು ಜಾರಿ ಮಾಡಿದ್ದಾರೆ.
ವೆಬ್‌ಸೈಟ್‌ನ ಕ್ರಮಗಳು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಹಾಗೂ ಕಲಂ 18ರ ಅಡಿಯಲ್ಲಿ ಗುರುತಿಸಬಹುದಾದ ಹಾಗೂ ಶಿಕ್ಷಿಸಬಹುದಾದ ಕ್ರಿಮಿನಲ್ ಅಪರಾಧವಾಗಿದೆ ಎಂದು ದಿಲ್ಲಿ ಪೊಲೀಸರ ಸೈಬರ್ ಕ್ರೈಮ್ ಘಟಕ ವೆಬ್‌ಸೈಟ್‌ಗೆ ಕಳುಹಿಸಿದ ಈ ಮೇಲ್‌ನಲ್ಲಿ ಹೇಳಿದೆ. ‘ಫೈಡೇಸ್ ಫಾರ್‌ಫ್ಯೂಚರ್. ಇನ್’ ವೆಬ್‌ಸೈಟ್ ಶಾಂತಿ ಹಾಗೂ ಸಾರ್ವಭೌಮತೆಗೆ ಅಡ್ಡಿ ಉಂಟು ಮಾಡಿದೆ ಎಂದು ನೋಟಿಸಿನಲ್ಲಿ ಪೊಲೀಸರು ತಿಳಿಸಿದ್ದಾರೆ. ವೆಬ್‌ಸೈಟ್ ಅನ್ನು ಕೂಡಲೇ ನಿರ್ಬಂಧಿಸುವಂತೆ ವೆಬ್‌ಸೈಟ್‌ನ ನಿರೂಪಕನಿಗೆ ಅದು ತಿಳಿಸಿದೆ. ಜುಲೈ 8ರಂದು ಈ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಗುರುವಾರ ಇದು ಬೆಳಕಿಗೆ ಬಂದಿದೆ. ಈಗ ಇತರ ಹಲವು ವೆಬ್‌ಸೈಟ್‌ಗಳೊಂದಿಗೆ ಈ ವೆಬ್‌ಸೈಟ್ ಅನ್ನು ಕೂಡ ಬ್ಲಾಕ್ ಮಾಡಲಾಗಿದೆ.
'ಫೈಡೇಸ್ ಫಾರ್‌ಫ್ಯೂಚರ್.ಇನ್' ಅಥವಾ ಎಫ್‌ಎಫ್‌ಎಫ್ ಇಂಡಿಯಾ 2019 ಮೇಯಲ್ಲಿ ಆರಂಭವಾಯಿತು. ಪರಿಸರ ಸಚಿವಾಲಯ ಮಾರ್ಚ್ 23ರಂದು ಜಾರಿಗೊಳಿಸಿದ ಕರಡು ಪರಿಸರ ಪರಿಣಾಮ ಅಂದಾಜು (ಇಎಲ್‌ಎ) ಅಧಿಸೂಚನೆ-2020ರ ವಿರುದ್ಧ ವೆಬ್‌ಸೈಟ್ 2020 ಜೂನ್ 4ರಂದು ಆನ್‌ಲೈನ್ ಅಭಿಯಾನ ಆರಂಭಿಸಿತ್ತು. ಸಂಬಂಧಿಸಿದ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿತ್ತು. ಆನ್‌ಲೈನ್ ಅಭಿಯಾನದ ಇಮೇಲ್ ಗಳನ್ನು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ, ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹಾಗೂ ಇಐಎ ಸಮಾಲೋಚನೆ ಪ್ರಕ್ರಿಯೆಗೆ ಕಳುಹಿಸಿಕೊಟ್ಟಿತ್ತು.







