ಕೊರೋನ ಪರೀಕ್ಷೆಗೆ ಮೊದಲೇ ಓಟಿಪಿ ಪಡೆಯಲು ಸಿಎಂ ಯಡಿಯೂರಪ್ಪ ಸೂಚನೆ

ಬೆಂಗಳೂರು, ಜು. 23: ಕೊರೋನ ಶಂಕಿತ ಸೋಂಕಿತರು ತಮ್ಮ ಮೊಬೈಲ್ ಸಂಖ್ಯೆ ತಪ್ಪಾಗಿ ನೀಡುತ್ತಿರುವುದರಿಂದ ಸೋಂಕು ದೃಢಪಟ್ಟರೆ ಅವರನ್ನು ಮತ್ತು ಅವರು ಸಂಪರ್ಕಿತರನ್ನು ಪತ್ತೆ ಮಾಡಲು ಆಗುತ್ತಿದ್ದ ತೊಂದರೆ ತಪ್ಪಿಸಲು ಪರೀಕ್ಷೆಗೂ ಮೊದಲೇ ಓಟಿಪಿ ಅಥವಾ ಬೇರೆ ದಾಖಲೆಯನ್ನು ಪಡೆಯುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಇಂದಿಲ್ಲಿ ನಿರ್ದೆಶನ ನೀಡಿದ್ದಾರೆ.
ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಪೂರ್ವ ಪಶ್ಚಿಮ ಮತ್ತು ಯಲಹಂಕ ವಲಯಗಳ ಕೋವಿಡ್-19 ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು, ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದರು.
ಅಲ್ಲದೆ, ಪರೀಕ್ಷಾ ವರದಿ 24 ಗಂಟೆಯ ಒಳಗೆ ಬರುವಂತೆ ಮಾಡಬೇಕು. ವಾರ್ಡ್ ಗಳಲ್ಲಿ ಕೋವಿಡ್-19 ಬಗ್ಗೆ ಮಾಹಿತಿ ನೀಡುವ ಜಾಹೀರಾತು ಫಲಕಗಳನ್ನು ಹಾಕಬೇಕು. ಕುಂಟು ನೆಪ ಹೇಳಿ ಕೆಲಸಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಜೊತೆಗೆ 5-ಟಿ ಸೂತ್ರವನ್ನು ಪಾಲಿಸಬೇಕು ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಸೂಚಿಸಿದರು.
ನಿಮ್ಮ ನಿಮ್ಮ ವಲಯಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕು. ಆ ನಿಟ್ಟಿನಲ್ಲಿ ನಿಗದಿತ ಗುರಿ ಸಾಧನೆ ಮಾಡಬೇಕು ಎಂದು ತಾಕೀತು ಮಾಡಿದ ಯಡಿಯೂರಪ್ಪ, ನಿಮ್ಮ ವಲಯಗಳ ಪ್ರಗತಿ ಬಗ್ಗೆ ಪ್ರತಿವಾರ ನನಗೆ ಮಾಹಿತಿ ನೀಡಬೇಕು. ಅಲ್ಲದೆ, ಸರಕಾರದ ಮಾರ್ಗಸೂಚಿ ಪಾಲಿಸುವ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಗೃಹ ಸಚಿವ ಬವಸರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ಥ ನಾರಾಯಣ, ಶಾಸಕ ಎಸ್.ಆರ್.ವಿಶ್ವನಾಥ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಆಹಾರ ಸಚಿವ ಕೆ.ಗೋಪಾಲಯ್ಯ, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಝಮೀರ್ ಅಹ್ಮದ್ ಖಾನ್, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.







