ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಸಿಇಟಿ: ಪ್ರತ್ಯೇಕ ವ್ಯವಸ್ಥೆಗೆ ಹೆಸರು ನೊಂದಾಯಿಸಿ; ಜಿಲ್ಲಾಧಿಕಾರಿ
ಉಡುಪಿ, ಜು.24: ಜಿಲ್ಲೆಯಲ್ಲಿ ಜುಲೈ 30 ಮತ್ತು 31 ರಂದು ನಡೆಯುವ ಸಿಇಟಿ ಪರೀಕ್ಷೆಗೆ ಹಾಜರಾಗುವ, ಕೋವಿಡ್-19 ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡುತ್ತಿದ್ದು, ಇಂತಹ ವಿದ್ಯಾರ್ಥಿಗಳು -https://ddpuudupi.blogspot.com- ಇದರಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಪ್ರಸ್ತುತ ಪಾಸಿಟಿವ್ ಇರುವ ವಿದ್ಯಾರ್ಥಿಗಳು ಪರೀಕ್ಷೆಯ ದಿನಾಂಕದೊಳಗೆ ಆಸ್ಪತ್ರೆಯಿಂದ ಬಿಡುಗಡೆ ಯಾಗಲು ಸಾದ್ಯವಾಗದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅವರು ಇರುವ ಕೋವಿಡ್ ಕೇರ್ ಸೆಂಟರ್ನಲ್ಲಿಯೇ ಪ್ರತ್ಯೇಕ ಕೊಠಡಿ ಸೌಲಭ್ಯದೊಂದಿಗೆ ಸಿಸಿಟಿವಿ ಅಳವಡಿಸಿ, ವೈದ್ಯರ ಮೂಲಕ ಪ್ರಶ್ನೆ ಪತ್ರಿಕೆ ತರಿಸಿ, ಪರೀಕ್ಷೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾ ಗುವುದು.ಈ ವ್ಯವಸ್ಥೆ ಜಿಲ್ಲೆಯಲ್ಲಿ ಪ್ರಥಮ ಪ್ರಯತ್ನವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಪಾಸಿಟಿವ್ ಇರುವ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ಮೇಲ್ಕಂಡ ಬ್ಲಾಗ್ನಲ್ಲಿ ತಮ್ಮ ವಿವರಗಳನ್ನು ದಾಖಲಿಸಿ ಈ ಸೌಲಭ್ಯದ ಪ್ರಯೋಜನ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಳಿಗೆ ದೂ.ಸಂ.: 0820-2575891 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆಗೆ ಹಾಜರಾಗಲು ಗ್ರಾಮೀಣ ಪ್ರದೇಶದಿಂದ ಬಸ್ ಸೌಲಭ್ಯ ವಿಲ್ಲದೇ ಅನಾನುಕೂಲ ಇರುವ ವಿದ್ಯಾರ್ಥಿಗಳು ತಮ್ಮ ದೂರವಾಣಿ ಸಂಖ್ಯೆ ಮತ್ತು ವಿವರಗಳನ್ನು ಉಡುಪಿಯ ಪಿಯು ಇಲಾಖೆಯ ಈಮೇಲ್ ವಿಳಾಸ -ddsu.pue@gmail.com- ಮತ್ತು ದೂ.ಸಂ.:0820-2575891ಕ್ಕೆ ಸಲ್ಲಿಸಿದ್ದಲ್ಲಿ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.