ಏಡ್ಸ್ ನಿಯಂತ್ರಣ ಯೋಜನೆ: ಎನ್‍ಜಿಒ, ಸಿಬಿಒ ಸಂಸ್ಥೆಗಳಿಗೆ ಬಾಕಿ ಹಣ ಬಿಡುಗಡೆಯಾಗಲಿ- ರೂಪ ಹಾಸನ
ಬೆಂಗಳೂರು, ಜು.24: ರಾಜ್ಯಾದ್ಯಂತ ಏಡ್ಸ್ ನಿಯಂತ್ರಣ ಯೋಜನೆಯಡಿ ಕೆಲಸ ಮಾಡುತ್ತಿರುವ ಎನ್‍ಜಿಒ ಹಾಗೂ ಸಿಬಿಒ(ಸಮುದಾಯ ಆಧಾರಿತ ಸಂಸ್ಥೆ)ಗಳಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಅಧ್ಯಯನ ಸಮಿತಿಯ ಸದಸ್ಯೆ ರೂಪ ಹಾಸನ ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ 23 ಎನ್‍ಜಿಒ ಹಾಗೂ 42 ಸಿಬಿಒ ಸಂಸ್ಥೆಗಳ ಮೂಲಕ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯ ಯೋಜನೆಗಳು ಕಾರ್ಯಗತಗೊಳ್ಳುತ್ತಿದೆ. ಈ ಎನ್‍ಜಿಒ, ಸಿಬಿಒ ಸಂಸ್ಥೆಗಳಿಗೆ ಕಳೆದ ನಾಲ್ಕು-ಐದು ವರ್ಷಗಳಿಂದ ಯೋಜನೆಗಳಿಗೆ ಬರಬೇಕಾದ ಹಣ ಬಾಕಿ ಉಳಿದಿದೆ. ಇದರಿಂದಾಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಬಡ ಮಹಿಳೆಯರು ಕಂಗಾಲಾಗಿದ್ದಾರೆ.
ಹಾಸನದ ಸಿಬಿಒ ಸಂಸ್ಥೆಗೆ ಬರಬೇಕಾದ ಸುಮಾರು ಎಂಟು ಲಕ್ಷ ರೂ.ವನ್ನು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಎಷ್ಟು ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಬಡ ಮಹಿಳೆಯರಿಗೆ ನ್ಯಾಯಬದ್ಧವಾಗಿ ಬರಬೇಕಾದ ಹಣ ಸಿಗದಿರುವುದು ಶೋಚನೀಯ ಸಂಗತಿಯಾಗಿದೆ.
ರಾಜ್ಯ ಎಡ್ಸ್ ನಿಯಂತ್ರಣ ಮಂಡಳಿಯು ರಾಜ್ಯಾದ್ಯಂತ ಎನ್‍ಜಿಒ ಹಾಗೂ ಸಿಬಿಒಗಳಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಡ್ಡಿ ಸಮೇತವಾಗಿ ಕೂಡಲೇ ನೀಡಬೇಕು. ಹಾಗೂ ಲೈಂಗಿಕ ದಮನಿತರಿಗೆ ಶಾಶ್ವತವಾದ ಹಾಗೂ ಸ್ವಾವಲಂಬಿ ಬದುಕನ್ನು ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಅವರು ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.







