ಏಶ್ಯನ್ ಗೇಮ್ಸ್ ಚಿನ್ನದ ಪದಕವನ್ನು ಕೋವಿಡ್ ಯೋಧರಿಗೆ ಅರ್ಪಿಸಿದ ಹಿಮಾ ದಾಸ್

ಹೊಸದಿಲ್ಲಿ, ಜು.24: ಜಕಾರ್ತದಲ್ಲಿ 2018ರಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನ 4400 ಮೀ. ಮಿಕ್ಸೆಡ್ ರಿಲೇ ತಂಡದಲ್ಲಿ ಪ್ರಶಸ್ತಿ ವಿಜೇತ ಬಹರೈನ್ ತಂಡದ ಓರ್ವ ಓಟಗಾರ್ತಿ ಡೋಪಿಂಗ್‌ಬಲೆಗೆ ಬಿದ್ದು ನಿಷೇಧಕ್ಕೆ ಒಳಗಾದ ಕಾರಣ ಎರಡನೇ ಸ್ಥಾನ ಪಡೆದಿದ್ದ ಭಾರತೀಯ ಅಥ್ಲೀಟ್‌ಗಳಿಗೆ ಮೊದಲ ಸ್ಥಾನಪ್ರಾಪ್ತಿಯಾಗಿದೆ. ಓಟದಲ್ಲಿ ಸ್ಪರ್ಧಿಸಿದ್ದ ಹಿಮಾ ದಾಸ್ ಅನಿರೀಕ್ಷಿತವಾಗಿ ಲಭಿಸಿರುವ ಚಿನ್ನದ ಪದಕವನ್ನು ಕೋವಿಡ್-19ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಸಮರ್ಪಿಸಿದ್ದಾರೆ.
ಕೆಮಿ ಅಡೆಕೋಯಾ ಡೋಪಿಂಗ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾದ ಕಾರಣ ಅಥ್ಲೆಟಿಕ್ಸ್ ಸಮಗ್ರತೆ ಘಟಕ(ಎಐಯು)ನಾಲ್ಕು ವರ್ಷಗಳ ಕಾಲ ನಿಷೇಧ ವಿಧಿಸಿತ್ತು. ಅಡೆಕೋಯಾ ನಿಷೇಧಕ್ಕೆ ಒಳಗಾದ ಹಿನ್ನೆಲೆಯಲ್ಲಿ 4400 ಮೀ. ಮಿಕ್ಸೆಡ್ ರಿಲೇ ಫೈನಲ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದ ಬಹರೈನ್ ತಂಡ ಚಿನ್ನದ ಪದಕ ಕಳೆದುಕೊಂಡಿದೆ. 3:15:71 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಮುಹಮ್ಮದ್ ಅನಸ್, ಎಂ.ಆರ್. ಪೂವಮ್ಮ, ಹಿಮಾ ದಾಸ್ ಹಾಗೂ ಅರೋಕಿಯಾ ರಾಜೀವ್ ಅವರಿದ್ದ ತಂಡ ಬಹರೈನ್(3:11:89 ಸೆ.)ಬಳಿಕ ಎರಡನೇ ಸ್ಥಾನ ಪಡೆದಿತ್ತು. ಏಶ್ಯನ್ ಗೇಮ್ಸ್‌ನಲ್ಲಿ ಭಾರತವು ಬೆಳ್ಳಿಯಿಂದ ಚಿನ್ನಕ್ಕೆ ಭಡ್ತಿ ಪಡೆದಿರುವ ಸಂಭ್ರಮವನ್ನು ಹಂಚಿಕೊಂಡ ಹಿಮಾ ದಾಸ್, ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಪದಕ ಅರ್ಪಿಸುವುದಾಗಿ ಹೇಳಿದ್ದಾರೆ.
‘‘ನಾನು 2018ರ ಏಶ್ಯನ್ ಗೇಮ್ಸ್‌ನಲ್ಲಿ 4400 ಮಿಕ್ಸೆಡ್ ರಿಲೇ ಸ್ಪರ್ಧೆಯಲ್ಲಿ ಗೆದ್ದಿರುವ ಚಿನ್ನದ ಪದಕವನ್ನು ಕೋವಿಡ್-19 ನಂತಹ ಕಠಿಣ ಸಮಯದಲ್ಲಿ ನಮ್ಮೆಲ್ಲರ ಸುರಕ್ಷತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವ ಪೊಲೀಸರು, ವೈದ್ಯರು ಹಾಗೂ ಇತರ ಎಲ್ಲ ಕೊರೋನ ವಾರಿಯರ್‌ಗಳಿಗೆ ಸಮರ್ಪಿಸಲು ಬಯಸುವೆ’’ ಎಂದರು.
ಮಿಕ್ಸೆಡ್ ರಿಲೇ ರೇಸ್‌ನ ಬಳಿಕ ಭಾರತವು ಬಹರೈನ್ ಓಟಗಾರ್ತಿ ತಮ್ಮ ಓಟಕ್ಕೆ ಅಡ್ಡಿಪಡಿಸಿದ್ದಾಗಿ ದೂರನ್ನು ನೀಡಿತ್ತು. ಹಿಮಾ ದಾಸ್‌ಗೆ ರೇಸ್ ವೇಳೆ ಬಹರೈನ್ ಓಟಗಾರ್ತಿ ಓಟಕ್ಕೆ ಅಡ್ಡಿಪಡಿಸಿದ್ದರು. ಭಾರತದ ದೂರನ್ನು ತಾಂತ್ರಿಕ ಸಮಿತಿಯು ತಿರಸ್ಕರಿಸಿತ್ತು. ಹೀಗಾಗಿ ಭಾರತವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು.







