ಮೂರನೇ ಟೆಸ್ಟ್: ಇಂಗ್ಲೆಂಡ್ ಸಾಧಾರಣ ಆರಂಭ
ಪೋಪ್, ಬರ್ನ್ಸ್ ಅರ್ಧಶತಕ, ರೋಚ್‌ಗೆ 2 ವಿಕೆಟ್

ಮ್ಯಾಂಚೆಸ್ಟರ್, ಜು.24: ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ಇಲ್ಲಿ ಆರಂಭವಾಗಿದ್ದು, ವೆಸ್ಟ್‌ಇಂಡೀಸ್‌ನಿಂದ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿರುವ ಆತಿಥೇಯ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 77 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 223 ರನ್ ಗಳಿಸಿದೆ.
ಐದನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 104 ರನ್ ಗಳಿಸಿರುವ ಒಲಿವೆರ್ ಪೋಪ್(ಔಟಾಗದೆ 72, 122 ಎಸೆತ, 8 ಬೌಂಡರಿ) ಹಾಗೂ ಜೋಸ್ ಬಟ್ಲರ್(ಔಟಾಗದೆ 40, 88 ಎಸೆತ, 3 ಬೌಂ.2 ಸಿ.) ಕ್ರೀಸ್ ಕಾಯ್ದುಕೊಂಡಿದ್ದಾರೆ. ಟಾಸ್ ಜಯಿಸಿದ ವಿಂಡೀಸ್ ಕ್ರಿಕೆಟ್ ತಂಡದ ನಾಯಕ ಜೇಸನ್ ಹೋಲ್ಡರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ವಿಂಡೀಸ್ ಆಡುವ ಬಳಗದಲ್ಲಿ 1 ಬದಲಾವಣೆ ಮಾಡಿದ್ದು, ಜೋಸೆಫ್ ಬದಲಿಗೆ ರಾಖೀಮ್ ಕಾರ್ನವಾಲ್‌ಗೆ ಅವಕಾಶ ನೀಡಿದೆ. ಇಂಗ್ಲೆಂಡ್ 11ರ ಬಳಗದಲ್ಲಿ 2 ಬದಲಾವಣೆ ಮಾಡಿದ್ದು, ಝಾಕ್ ಕ್ರಾವ್ಲೆ ಹಾಗೂ ಸ್ಯಾಮ್ ಕರನ್ ಅವರು ಕ್ರಮವಾಗಿ ಜೋಫ್ರಾ ಆರ್ಚರ್ ಹಾಗೂ ಆ್ಯಂಡರ್ಸನ್‌ಗೆ ದಾರಿ ಮಾಡಿಕೊಟ್ಟಿದ್ದಾರೆ.
ಬರ್ನ್ಸ್ ಹಾಗೂ ಸಿಬ್ಲೆ ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ಆರಂಭಿಸಿದರು. ಇನಿಂಗ್ಸ್‌ನಮೊದಲ ಓವರ್‌ನಲ್ಲೇ ಸಿಬ್ಲೆ(0)ರೋಚ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಆಗ ಜೊತೆಯಾದ ನಾಯಕ ಜೋ ರೂಟ್ ಹಾಗೂ ಬರ್ನ್ಸ್ 2ನೇ ವಿಕೆಟ್‌ಗೆ 47 ರನ್ ಸೇರಿಸಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಲು ಯತ್ನಿಸಿದರು.
ರೂಟ್ (17 ರನ್)22ನೇ ಓವರ್‌ನಲ್ಲಿ ಚೇಸ್‌ರಿಂದ ರನೌಟಾದರು. ಆಲ್‌ರೌಂಡರ್ ಬೆನ್ ಸ್ಟೋಕ್ಸ್(20)ಅವರೊಂದಿಗೆ 3ನೇ ವಿಕೆಟ್‌ಗೆ 45 ರನ್ ಜೊತೆಯಾಟ ನಡೆಸಿದ ಬರ್ನ್ಸ್ ತಂಡವನ್ನು ಆಧರಿಸಿದರು. ಸ್ಟೋಕ್ಸ್‌ರನ್ನು ಕ್ಲೀನ್‌ಬೌಲ್ಡ್ ಮಾಡಿದ ರೋಚ್ ಈ ಜೋಡಿಯನ್ನು ಬೇರ್ಪಡಿಸಿದರು.
ಸ್ಟೋಕ್ಸ್ ತನ್ನಿಂದ ಬೇರ್ಪಟ್ಟ ಬಳಿಕ ಪೋಪ್ ಜೊತೆಗೆ ಕೈಜೋಡಿಸಿದ ಬರ್ನ್ಸ್ 4ನೇ ವಿಕೆಟ್‌ಗೆ 30 ರನ್ ಸೇರಿಸಿದರು.126 ಎಸೆತಗಳಲ್ಲಿ 3 ಬೌಂಡರಿಗಳ ಸಹಾಯದಿಂದ ತಾಳ್ಮೆಯಿಂದ ಅರ್ಧಶತಕ ಪೂರೈಸಿದ ಬರ್ನ್ಸ್ ಹೋರಾಟಕ್ಕೆ ಚೇಸ್ ತೆರೆದರು. ಬರ್ನ್ಸ್ 57 ರನ್(147 ಎಸೆತ, 4 ಬೌಂಡರಿ)ಗಳಿಸಿ ವಿಕೆಟ್ ಒಪ್ಪಿಸಿದರು.
ಈಗ 3 ಪಂದ್ಯಗಳ ಟೆಸ್ಟ್ ಸರಣಿಯು 1-1ರಿಂದ ಸಮಬಲದಲ್ಲಿದ್ದು, ಉಭಯ ತಂಡಗಳಿಗೆ ಸರಣಿ ಜಯಿಸಲು ಮೂರನೇ ಪಂದ್ಯ ನಿರ್ಣಾಯಕವಾಗಿದೆ. ವೆಸ್ಟ್ ಇಂಡೀಸ್ ಸೌತಾಂಪ್ಟನ್‌ನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿತ್ತು. ಇಂಗ್ಲೆಂಡ್ 2ನೇ ಟೆಸ್ಟ್ ನಲ್ಲಿ ತಿರುಗೇಟು ನೀಡಿದ್ದು, ಬೆನ್ ಸ್ಟೋಕ್ಸ್ ಸಾಹಸದ ನೆರವಿನಿಂದ 113 ರನ್‌ಗಳ ಅಂತರದಿಂದ ಜಯ ದಾಖಲಿಸಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು.







