ಭಾರತ-ಆಸ್ಟ್ರೇಲಿಯ ಪ್ರವಾಸಕ್ಕೆ ದೊಡ್ಡ ತಂಡದ ಅಗತ್ಯವಿದೆ: ಎಂ.ಎಸ್.ಕೆ ಪ್ರಸಾದ್
ಹೊಸದಿಲ್ಲಿ, ಜು.24: ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಭಾರತ ತಂಡ ಅಡಿಲೇಡ್‌ನಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕೆಂಬ ನಿಯಮ ಇರುವ ಕಾರಣ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ವೆಸ್ಟ್‌ಇಂಡೀಸ್ ಹಾಗೂ ಪಾಕಿಸ್ತಾನ ತಂಡಗಳಂತೆಯೇ ಕನಿಷ್ಠ 26 ಆಟಗಾರರಿರುವ ಜಂಬೋ ಭಾರತ ತಂಡವೊಂದನ್ನು ಬಿಸಿಸಿಐ ಕಳುಹಿಸಿಕೊಡಬೇಕೆಂದು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಸಲಹೆ ನೀಡಿದ್ದಾರೆ.
ಇಂಗ್ಲೆಂಡ್‌ನಲ್ಲಿರುವ ಕೋವಿಡ್-19 ಮಾರ್ಗಸೂಚಿಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಪಾಕಿಸ್ತಾನವು 29 ಸದಸ್ಯರಿರುವ ತಂಡವನ್ನು ಹಾಗೂ ವೆಸ್ಟ್‌ಇಂಡೀಸ್ 26 ಆಟಗಾರರನ್ನು ಒಳಗೊಂಡ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸಿಕೊಟ್ಟಿದೆ.
‘‘ಭಾರತ ಕ್ರಿಕೆಟ್ ತಂಡದ ಬಾಗಿಲನ್ನು ತಟ್ಟುತ್ತಿರುವ ಉದಯೋನ್ಮುಖ ಆಟಗಾರರಿಗೆ ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಸೀನಿಯರ್‌ಗಳು ಅವಕಾಶ ನೀಡಬೇಕು. ಈ ಪ್ರಕ್ರಿಯೆಯಲ್ಲಿ ಭವಿಷ್ಯದಲ್ಲಿ ಮಿಂಚಬಲ್ಲ ಆಟಗಾರರ ಮೇಲೆ ನಿಗಾವಹಿಸಬೇಕು’’ ಎಂದು ಫೆಬ್ರವರಿಯ ತನಕ ಆಯ್ಕೆ ಸಮಿತಿಯಲ್ಲಿದ್ದ ಪ್ರಸಾದ್ ಸುದ್ದಿಸಂಸ್ಥೆ ಪಿಟಿಐ ತಿಳಿಸಿದ್ದಾರೆ.
ಭಾರತವು 26 ಆಟಗಾರರ ತಂಡವನ್ನು ಆಯ್ಕೆ ಮಾಡಿದರೆ ಅದನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು ಹಾಗೂ ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸ ಪಂದ್ಯವನ್ನು ಆಡಬಹುದು.







