ಚೀನಾದಲ್ಲಿ ನಡೆಯಬೇಕಾಗಿರುವ ಉಳಿದೆಲ್ಲಾ ಟೂರ್ನಿ ರದ್ದುಪಡಿಸಿದ ‘ಎಟಿಪಿ, ಡಬ್ಲ್ಯುಟಿಎ’
ಕೊರೋನ ವೆರಸ್ ಹಿನ್ನೆಲೆ
ಬೀಜಿಂಗ್, ಜು.24: ಎರಡು ಪ್ರಮುಖ ಟೆನಿಸ್ ಟೂರ್‌ಗಳಾದ ಎಟಿಪಿ ಹಾಗೂ ಡಬ್ಲುಟಿಎ ಈ ವರ್ಷ ಚೀನಾದಲ್ಲಿ ಬಾಕಿ ಉಳಿದಿರುವ ಡಬ್ಲ್ಯುಟಿಎ ಫೈನಲ್ಸ್ ಸಹಿತ ಎಲ್ಲ ಟೂರ್ನಿಗಳನ್ನು ರದ್ದುಪಡಿಸಿದೆ. ಕೋವಿಡ್-19 ಕಾರಣಕ್ಕೆ ಚೀನಾವು ತನ್ನ ಎಲ್ಲಾ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಚೀನಾ ಸೂಪರ್ ಲೀಗ್ ಋತುವು ಐದು ತಿಂಗಳ ವಿಳಂಬದ ಬಳಿಕ ವಾರಾಂತ್ಯದಲ್ಲಿ ಆರಂಭವಾಗಲಿದೆ. ರವಿವಾರದಿಂದ ಚೀನಾದ ಟಾಪ್ ಬಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಕೆಲವು ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಚೀನಾದ ಉನ್ನತ ಕ್ರೀಡಾ ಮಂಡಳಿ ಜನರಲ್ ಅಡ್ಮಿನಿಸ್ಟ್ರೇಶನ್ ಆಫ್ ಸ್ಪೋರ್ಟ್ಸ್ ತಿಳಿಸಿದೆ. ಶಾಂಘೈ ನಗರ ಈ ವರ್ಷ ಫಾರ್ಮುಲಾ ಒನ್ ವರ್ಲ್ಡ್ ಚಾಂಪಿಯನ್‌ಶಿಪ್ ಹಾಗೂ ಗಾಲ್ಫ್ ಡಬ್ಲ್ಯುಜಿಸಿ-ಎಚ್‌ಎಸ್‌ಬಿಸಿ ಚಾಂಪಿಯನ್ಸ್ ಸಹಿತ ಹಲವು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಿದೆ.
ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟವು ಚಾಂಗ್‌ಝೌನಲ್ಲಿ ಸೆಪ್ಟಂಬರ್ 15ರಿಂದ 20ರ ತನಕ ಚೀನಾ ಓಪನ್ ಹಾಗೂ ನವೆಂಬರ್ 3ರಿಂದ 8ರ ತನಕ ಫುಝೌನಲ್ಲಿ ಟೂರ್ನಮೆಂಟ್‌ನ್ನು ನಿಗದಿಪಡಿಸಿದೆ.





