ಜಲ್ಲಿ ಕ್ರಷರ್ ಗಳ ನಿಯಂತ್ರಣ ಕಾಯ್ದೆ 2011ಕ್ಕೆ ತಿದ್ದುಪಡಿ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಜು.25: ವಿಧಾನ ಸಭೆಯಲ್ಲಿ ಚರ್ಚಿಸದೆ, ಸಾರ್ವಜನಿಕ ಅಭಿಪ್ರಾಯ ಆಲಿಸದೆ ಕರ್ನಾಟಕ ಜಲ್ಲಿ ಕ್ರಷರ್ ಗಳ ನಿಯಂತ್ರಣ ಕಾಯ್ದೆ 2011ಕ್ಕೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಆರ್.ಆಂಜನೇಯರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಕರ್ನಾಟಕ ಜಲ್ಲಿ ಕ್ರಷರ್ ಗಳ ನಿಯಂತ್ರಣ ಕಾಯ್ದೆ 2011ಕ್ಕೆ ತಿದ್ದುಪಡಿ ತಂದಿರುವ ರಾಜ್ಯ ಸರಕಾರ ಈ ಹಿಂದೆ ಕೋರ್ಟ್ ಸೂಚಿಸಿದ್ದ ಸುರಕ್ಷತಾ ವಲಯವನ್ನು ನಿರ್ಲಕ್ಷಿಸಿದೆ. ಜೊತೆಗೆ ರಾಜ್ಯಪಾಲರು ಕಾಯ್ದೆ ಸಂಬಂಧ ಯಾವುದೇ ತುರ್ತು ಇಲ್ಲದಿದ್ದರೂ ಸಂವಿಧಾನದ ವಿಧಿ 213ರಡಿ ಲಭ್ಯವಿರುವ ಅಧಿಕಾರ ಬಳಸಿ ಸುಗ್ರೀವಾಜ್ಞೆಗೆ ವಿವೇಕರಹಿತವಾಗಿ ಅಂಕಿತ ಹಾಕಿದ್ದಾರೆ. ಕಾಯ್ದೆ ಸಂಬಂಧ ಯಾವುದೇ ತುರ್ತು ಪರಿಸ್ಥಿತಿ ಇಲ್ಲದಿದ್ದರೂ ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ಸಾರ್ವಜನಿಕ ನಂಬಿಕೆಯ ಉಲ್ಲಂಘನೆ ಮತ್ತು ಅಸಂವಿಧಾನಿಕ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಸರಕಾರ ಗಣಿ ಮತ್ತು ಕ್ರಷರ್ ಕುಳಗಳಿಗೆ ನೆರವು ನೀಡಲು ಮುಂದಾಗಿದೆ ಎಂದು ಆರೋಪಿಸಿರುವ ಅರ್ಜಿದಾರರು ಸರಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತಂದು ಮಾರ್ಚ್ 31 ರಂದು ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಪ್ರತಿವಾದಿಗಳಾದ ಸರಕಾರದ ಮುಖ್ಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.
ವಿವಾದವೇನು: ಹೈಕೋರ್ಟ್ ನಿರ್ದೇಶನಗಳ ಮೇರೆಗೆ ಕಾಯ್ದೆ ರೂಪಿಸಿದ್ದ ಸರಕಾರ ಸುರಕ್ಷತಾ ವಲಯಕ್ಕೆ ಆದ್ಯತೆ ನೀಡಿತ್ತು. ಅದರಂತೆ ಜಲ್ಲಿ ಕ್ರಷರ್ ಗಳು ಸಾರ್ವಜನಿಕ ಪ್ರದೇಶಗಳಾದ ಶಾಲೆ, ದೇವಸ್ಥಾನ, ಜನ ವಸತಿ ಪ್ರದೇಶದಿಂದ ಕನಿಷ್ಠ 2 ಕಿ.ಮೀ ದೂರವಿರಬೇಕು. ರಾಷ್ಟ್ರೀಯ ಹೆದ್ದಾರಿಯಿಂದ 1.5 ಕಿಮೀ, ಸಂಪರ್ಕ ರಸ್ತೆಗಳಿಂದ ಅರ್ಧ ಕಿ.ಮೀ ದೂರದಲ್ಲಿರಬೇಕು ಎಂದು ನಿಯಮ ರೂಪಿಸಿತ್ತು. ಇದೀಗ ಎಲ್ಲ ನಿಯಮಗಳನ್ನು ಸಡಿಲಿಸಲಾಗಿದ್ದು, ತಿದ್ದುಪಡಿ ಕಾಯ್ದೆಯಲ್ಲಿ ಸೆಕ್ಷನ್ 3ರ ಸಬ್ ಸೆಕ್ಷನ್‍ಗಳ ನಿಯಮಗಳನ್ನು ಕೈಬಿಡಲಾಗಿದೆ. ಸುರಕ್ಷತಾ ವಲಯದಲ್ಲಿಯೂ ಕಡಿತ ಮಾಡಿದ್ದು ಕೃಷಿ ಭೂಮಿಗೆ ಇದ್ದ 100 ಮೀಟರ್ ಅಂತರವನ್ನು 50 ಮೀಟರ್ ಗೆ ಇಳಿಸಿದೆ. ಇದು ರೈತರ ತೋಟಗಾರಿಕೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೃಷಿಯನ್ನೇ ನಂಬಿರುವ ಶೇ.80 ರಷ್ಟು ರೈತರ ಬದುಕನ್ನು ಅತಂತ್ರಗೊಳಿಸಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಇನ್ನು ಕ್ರಷರ್ ಗಳ ಮಾಲಿನ್ಯ ನಿಯಂತ್ರಿಸಲು ಹಾಗೂ ಸುರಕ್ಷತಾ ವಲಯವನ್ನು ಕಾಪಾಡಲು ಒಂದು ವರ್ಷದ ಅವಧಿಗೆ ಮಾತ್ರ ಪರವಾನಿಗೆ ನೀಡುವ ಮತ್ತು ನಿಬಂಧನೆಗಳನ್ನು ಪಾಲಿಸಿದರೆ ವರ್ಷಕ್ಕೊಮ್ಮೆ ಪರವಾನಿಗೆ ನವೀಕರಿಸಿಕೊಳ್ಳುವ ನಿಯಮವಿತ್ತು. ಆದರೀಗ, ತಿದ್ದುಪಡಿ ಕಾಯ್ದೆಯ ಸೆಕ್ಷನ್ 4(ಎ) ಪ್ರಕಾರ ಯಾವುದೇ ವ್ಯಕ್ತಿ ತಾನು ಪಡೆದುಕೊಂಡ ಪರವಾನಿಗೆಯನ್ನು ಕಾರಣವಿಲ್ಲದೆಯೂ ಯಾವುದೇ ವ್ಯಕ್ತಿಗೆ ಹಸ್ತಾಂತರಿಸಬಹುದಾಗಿದೆ. ಅಂತೆಯೇ, ಸೆಕ್ಷನ್ 5ರ ಪ್ರಕಾರ ಪರವಾನಿಗೆಯನ್ನು 20 ವರ್ಷಗಳ ಅವಧಿಗೆ ನೀಡಬಹುದಾಗಿದೆ. ನಂತರ 10 ವರ್ಷಗಳ ಸುದೀರ್ಘ ಅವಧಿಗೆ ನವೀಕರಿಸಿಕೊಳ್ಳಬಹುದಾಗಿದೆ. ಹೀಗೆ ದಶಕಗಳ ಕಾಲ ಪರವಾನಿಗೆ ನೀಡುವುದರಿಂದ ಸರಕಾರಕ್ಕೆ ಕ್ರಷರ್ ಗಳ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಬದಲಿಗೆ ಲೈಸೆನ್ಸ್ ಪಡೆದುಕೊಳ್ಳುವ ವ್ಯಕ್ತಿ ಶಾಶ್ವತ ಮಾಲಕನಂತೆ ವರ್ತಿಸುತ್ತಾನೆ ಎಂಬ ಆರೋಪವಿದೆ.







