ಸಹೋದ್ಯೋಗಿಯನ್ನು ಗುಂಡು ಹಾರಿಸಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಸಿಆರ್‌ಪಿಎಫ್ ಪೊಲೀಸ್

ಹೊಸದಿಲ್ಲಿ, ಜು. 25: ಕೇಂದ್ರ ಮೀಸಲು ಪಡೆ (ಸಿಆರ್‌ಪಿಎಫ್)ಯ ಸಬ್ ಇನ್‌ಸ್ಪೆಕ್ಟರ್ ಒಬ್ಬರು ತನ್ನ ಸೇವಾ ರಿವಾಲ್ವರ್‌ನಿಂದ ಸಿಆರ್‌ಪಿಎಫ್‌ನ ಇನ್‌ಸ್ಪೆಕ್ಟರ್ ಓರ್ವರ ಮೇಲೆ ಗುಂಡು ಹಾರಿಸಿ ಹತ್ಯೆಗೈದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಘಟನೆ ದಿಲ್ಲಿಯ ಲೋಧಿ ಎಸ್ಟೇಟ್ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.
ಗೃಹ ಸಚಿವಾಲಯ ಮಂಜೂರು ಮಾಡಿದ ಲೋಧಿ ಎಸ್ಟೇಟ್‌ನಲ್ಲಿರುವ ಬಂಗ್ಲೆಯಲ್ಲಿ ರಾತ್ರಿ 10.30ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ತಂಡ ಘಟನಾ ಸ್ಥಳಕ್ಕೆ ತಲುಪಿದ ಸಂದರ್ಭ ಸಿಆರ್‌ಪಿಎಫ್‌ನ ಇಬ್ಬರೂ ಯೋಧರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆದರೆ, ಗುಂಡಿನಿಂದ ಗಂಭೀರ ಗಾಯಗೊಂಡಿದ್ದ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.
ಇಬ್ಬರು ಯೋಧರ ನಡುವೆ ಘರ್ಷಣೆ ಸಂಭವಿಸಿದೆ. ಈ ಸಂದರ್ಭ ಸಬ್ ಇನ್‌ಸ್ಪೆಕ್ಟರ್ ಕರ್ನೈಲ್ ಸಿಂಗ್ ತನ್ನ ಸೇವಾ ರಿವಾಲ್ವರ್‌ನಿಂದ ಇನ್‌ಸ್ಪೆಕ್ಟರ್ ದಶರಥ ಸಿಂಗ್ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಅನಂತರ ಅದೇ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸಬ್ ಇನ್‌ಸ್ಪೆಕ್ಟರ್ ಕರ್ನೈಲ್ ಸಿಂಗ್ ಜಮ್ಮು ಹಾಗೂ ಕಾಶ್ಮೀರದ ಉಧಮ್ ಪುರದವರು, ಇನ್‌ಸ್ಪೆಕ್ಟರ್ ದಶರಥ ಸಿಂಗ್ ಹರ್ಯಾಣದ ರೋಹ್ಟಕ್‌ನವರು. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಇದರಿಂದ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಸಿಆರ್‌ಪಿಎಫ್‌ನ ಅಧಿಕೃತ ವಕ್ತಾರ ಎಂ. ದಿನಕರನ್ ತಿಳಿಸಿದ್ದಾರೆ.







