ಕೋವಿಡ್ ಭ್ರಷ್ಟಾಚಾರ ಆರೋಪ: ತನಿಖೆಗೆ ಆಗ್ರಹಿಸಿ ಕೆಎಸ್ಆರ್ ಧರಣಿ

ಉಡುಪಿ, ಜು.25: ಕೋವಿಡ್-19 ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಮತ್ತು ಭ್ರಷ್ಟರಿಗೆ ಬೆಂಗಾವಲಾಗಿ ನಿಂತ ಸ್ಪೀಕರ್ ಅವರ ರಾಜೀನಾಮೆಗೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಉಡುಪಿ ಜಿಲ್ಲೆ ಇದರ ವತಿಯಿಂದ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಕೋವಿಡ್-19 ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ. ದುಬಾರಿ ಹಣ ನೀಡಿ ವೆಂಟಿಲೇಟರ್ ಖರೀದಿಸಲಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ರಾಜ್ಯ ಸರಕಾರ ಜನರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿದರು. ಉಡುಪಿಯ ಸ್ವರ್ಣಾ ನದಿಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಗೃಹ ಸಚಿವರಿಗೆ ಮನವಿ ನೀಡಲಾಗಿದೆ. ಆದರೆ ಸಚಿವರೂ ಈವರೆಗೆ ಸ್ಪಂದಿಸಿಲ್ಲ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಈ ಅಕ್ರಮದಲ್ಲಿ ಭಾಗಿಯಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಈ ಬಗ್ಗೆ ನ್ಯಾಯಾಲಯ, ಜನತಾ ನ್ಯಾಯಾಲಯದ ಮೂಲಕ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಾಹಿದ್ ಅಲಿ, ಖಜಾಂಚಿ ವಿನೋದ್ ಬಂಗೇರ, ಜಿಲ್ಲಾ ಕಾರ್ಯದರ್ಶಿ ವಿನುತಾ ಕಿರಣ್, ಪ್ರಮುಖರಾದ ಶ್ರೀನಿವಾಸ್, ಕಿರಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.





