ನಮ್ಮ ಸಶಸ್ತ್ರ ಪಡೆಗಳ ಸಾಹಸಕ್ಕೆ ಧನ್ಯವಾದಗಳು
'ಮನ್ ಕಿ ಬಾತ್'ನಲ್ಲಿ ಕಾರ್ಗಿಲ್ ವೀರರಿಗೆ ಗೌರವ ಸಲ್ಲಿಸಿದ ಪ್ರಧಾನಿ

ಹೊಸದಿಲ್ಲಿ, ಜು.26:ಪ್ರಧಾನಮಂತ್ರಿ ನರೇಂದ್ರ ಮೋದಿ ರವಿವಾರ ತಮ ್ಮತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಕಾರ್ಗಿಲ್ ಯುದ್ಧದ ಹೀರೊಗಳಿಗೆ ಗೌರವ ಸಲ್ಲಿಸಿದರು.
ಭಾರತೀಯ ಸೇನೆ 21 ವರ್ಷಗಳ ಹಿಂದೆ (1999ರ ಜುಲೈ 26)ಪಾಕಿಸ್ತಾನ ಸೇನೆ ಆಕ್ರಮಿಸಿಕೊಂಡಿದ್ದ ಲಡಾಖ್‌ನ ಕಾರ್ಗಿಲ್‌ನಲ್ಲಿದ್ದ ಭಾರತದ ಪ್ರದೇಶವನ್ನು ಮತ್ತೆ ವಶಕ್ಕೆ ಪಡೆದುಕೊಂಡಿತ್ತು.ಈ ದಿನವನ್ನು ಪ್ರತಿ ವರ್ಷ ಕಾರ್ಗಿಲ್ ದಿವಸವಾಗಿ ಆಚರಿಸಲಾಗುತ್ತಿದೆ.
"ಈ ದಿನ ತುಂಬಾ ವಿಶೇಷವಾದುದು. ಯುದ್ಧ ನಡೆದ ಸಮಯವನ್ನು ಹಾಗೂ ಪರಿಸ್ಥಿತಿಯನ್ನು ಯಾರೂ ಮರೆಯಲಾರರು. ಭಾರತವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಲು ಬಯಸಿತ್ತು. ಪಾಕಿಸ್ತಾನ ಭಾರತಕ್ಕೆ ದ್ರೋಹ ಬಗೆಯಲು ಯತ್ನಿಸಿತು. ಆದರೆ, ಅದು ಸಾಧ್ಯವಾಗಲಿಲ್ಲ . . ನಮ್ಮ ಸಶಸ್ತ್ರ ಪಡೆಗಳ ಧೈರ್ಯಕ್ಕೆ ನಾನು ಧನ್ಯವಾದ ಹೇಳುವೆ. ಕಾರ್ಗಿಲ್‌ನಲ್ಲಿ ಭಾರತವು ತನ್ನ ಶ್ರೇಷ್ಠ ಶಕ್ತಿಯನ್ನು ಪ್ರದರ್ಶಿಸಿತ್ತು''ಎಂದು ಪಿಎಂ ಮೋದಿ ಹೇಳಿದರು.
ಚೀನಾದ ಹೆಸರನ್ನು ಪ್ರಸ್ತಾವಿಸದೆ, ಭಾರತೀಯ ಪಡೆಗಳ ಸಾಹಸವನ್ನು ಜನರು ಹೇಗೆ ಶ್ಲಾಘಿಸುತ್ತಿದ್ದಾರೆ ಎನ್ನುವುದನ್ನು ತಮ ್ಮಭಾಷಣದಲ್ಲಿ ಉಲ್ಲೇಖಿಸಿದರು.
ಕೊರೋನ ವೈರಸ್ ಈಗಲೂ ಅಪಾಯಕಾರಿ
"ಕೊರೋನ ವೈರಸ್ ಈಗಲೂ ಅಪಾಯಕಾರಿಯಾಗಿದ್ದು, ವೈರಸ್ ಹರಡುವುದನ್ನು ತಡೆಗಟ್ಟಲು ಮುನ್ನಚ್ಚರಿಕಾ ಕ್ರಮ ಕೈಗೊಳ್ಳಬೇಕು. ಇಂದು ನಮ್ಮ ದೇಶದಲ್ಲಿ ಕೋವಿಡ್-19 ಚೇತರಿಕೆಯ ದರ ಇತರ ದೇಶಗಳಿಗಿಂತ ಉತ್ತಮವಾಗಿದೆ. ನಾವು ಲಕ್ಷಾಂತರ ಜನರ ಜೀವವನ್ನು ಉಳಿಸಲು ಶಕ್ತರಾಗಿದ್ದೇವೆ. ಆದರೆ, ಕೊರೋನ ವೈರಸ್ ಭೀತಿ ಇಲ್ಲಿಗೇ ಮುಗಿದಿಲ್ಲ. ನಾವು ಜಾಗೃತರಾಗಿರಬೇಕಾದ ಅಗತ್ಯವಿದೆ. ಕೊರೋನ ವೈರಸ್ ಈಗಲೂ ಅಪಾಯಕಾರಿಯಾಗಿದ್ದು, ಈಗ ಆರಂಭವಾಗಿದೆ ಎಂದು ನಾವೆಲ್ಲರೂ ನೆನಪಿನಲ್ಲಿಡಬೇಕಾಗಿದೆ'' ಎಂದು ತನ್ನ 66ನೆ ಆವೃತ್ತಿಯ ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಮೋದಿ ಹೇಳಿದ್ದಾರೆ.







