98 ಶೇ.ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಘೋಷಿಸಿದ ಪಂಜಾಬ್ ಸಿಎಂ

ಹೊಸದಿಲ್ಲಿ, ಜು.26: ಪಂಜಾಬ್‌ನಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ.98ಕ್ಕೂ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ತಲಾ 5,100 ನಗದು ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ "ಆಸ್ಕ್ ಕ್ಯಾಪ್ಟನ್' ಎಂಬ ತನ್ನ ವಾರದ ಸಂವಹನ ಕಾರ್ಯಕ್ರಮದಲ್ಲಿ ಸಿಂಗ್ ಈ ಘೋಷಣೆ ಮಾಡಿದರು.
ಪಂಜಾಬ್ ಪರೀಕ್ಷಾ ಮಂಡಳಿ ನಡೆಸಿರುವ 12ನೇ ತರಗತಿಯ ಪರೀಕ್ಷೆಯಲ್ಲಿ ಶೇ.98ಕ್ಕೂ ಅಧಿಕ ಅಂಕ ಗಳಿಸಿರುವ 335 ವಿದ್ಯಾರ್ಥಿಗಳಿಗೆ ತಲಾ 5,100 ರೂ. ಬಹುಮಾನ ನೀಡುವುದಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಘೋಷಿಸಿದರು.
ಅಭೂತಪೂರ್ವ ಫಲಿತಾಂಶ(94.32 ಶೇ.)ಸಾಧಿಸಲು ಕಠಿಣ ಶ್ರಮಪಟ್ಟಿರುವ ಸರಕಾರಿ ಶಾಲಾ ಶಿಕ್ಷಕರನ್ನು ಅಮರಿಂದರ್ ಸಿಂಗ್ ಶ್ಲಾಘಿಸಿದರು.
ಪಂಜಾಬ್‌ನ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಜುಲೈ 21ಕ್ಕೆ ಪ್ರಕಟವಾಗಿತ್ತು. ಈ ವರ್ಷ 90.98 ಶೇ. ವಿದ್ಯಾರ್ಥಿಗಳು ಪಾಸಾಗಿದ್ದು, ಕಳೆದ ವರ್ಷಕ್ಕಿಂತ ಶೇ.4.5ರಷ್ಟು ಉತ್ತಮ ಫಲಿತಾಂಶ ಬಂದಿತ್ತು.
ಸರಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಉನ್ನತ ದರ್ಜೆಗೇರಿಸುವುದನ್ನು ಖಚಿತಪಡಿಸಿಕೊಳ್ಳಲು ಸರಕಾರವು ದಕ್ಷ ಶಿಕ್ಷಕರನ್ನು ನೇಮಿಸಿತ್ತು. ಇದರ ಫಲವಾಗಿ ಸರಕಾರಿ ಶಾಲೆಗಳು ಮಂಡಳಿಯ ಪರೀಕ್ಷೆಗಳಲ್ಲಿ ಅದ್ಭುತ ಫಲಿತಾಂಶ ಪಡೆದಿವೆ ಎಂದು ಪಂಜಾಬ್ ಸಿಎಂ ಟ್ವೀಟ್ ಮಾಡಿದ್ದಾರೆ.







