ಜುಲೈ 31ರಿಂದ ವಿಧಾನಸಭೆ ಅಧಿವೇಶನ: ರಾಜ್ಯಪಾಲರಿಗೆ ಗೆಹ್ಲೋಟ್ ಮನವಿ

ಜೈಪುರ, ಜು.26: ಜುಲೈ 31ರಿಂದ ರಾಜಸ್ತಾನ ವಿಧಾನಸಭೆ ಅಧಿವೇಶನ ಆರಂಭಿಸಬೇಕೆಂಬ ಹೊಸ ಪ್ರಸ್ತಾವ ಉಳ್ಳ ಮನವಿಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಪಾಲರ ಮುಂದಿರಿಸಿದ್ದಾರೆ . ಕೊರೋನ ವೈರಸ್ ಸೋಂಕಿನ ಬಗ್ಗೆ ಚರ್ಚಿಸುವುದು ಅಧಿವೇಶನದ ಪ್ರಮುಖ ಅಜೆಂಡಾ ಆಗಲಿದೆ, ವಿಶ್ವಾಸಮತ ಯಾಚನೆಯಲ್ಲ ಎಂದು ಗೆಹ್ಲೋಟ್ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ವಿಧಾನಸಭೆ ಅಧಿವೇಶನ ಕರೆಯವಂತೆ ಗೆಹ್ಲೋಟ್ ಈ ಹಿಂದೆ ಕಳಿಸಿದ್ದ ಮನವಿ ಪತ್ರವನ್ನು ರಾಜ್ಯಪಾಲ ಕಲ್‌ರಾಜ್ ಮಿಶ್ರಾ ತಿರಸ್ಕರಿಸಿದ್ದರು. ಮನವಿ ಪತ್ರದಲ್ಲಿ ದಿನಾಂಕ ಮತ್ತು ಅಧಿವೇಶನ ಕರೆಯಲು ಕಾರಣವೇನು ಎಂಬುದನ್ನು ಉಲ್ಲೇಖಿಸಿಲ್ಲ . ಅಲ್ಲದೆ , ಸಚಿನ್ ಪೈಲಟ್ ಬಣದ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೀಡಿರುವ ನೋಟಿಸ್‌ನ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ರಾಜ್ಯಪಾಲರು ತಿಳಿಸಿದ್ದರು.
ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಕೊನೆಗೊಳಿಸಲು ಸದನದಲ್ಲಿ ವಿಶ್ವಾಸಮತ ಯಾಚನೆಗೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಿರಂತರವಾಗಿ ಒತ್ತಾಯಿಸುತ್ತಿದೆ.
ಈ ಮಧ್ಯೆ, ರಾಜ್ಯಪಾಲರನ್ನು ಭೇಟಿಯಾದ 12 ಸದಸ್ಯರ ಬಿಜೆಪಿ ನಿಯೋಗ, ಕಾಂಗ್ರೆಸ್ ಸರಕಾರ ಸಾಂವಿಧಾನಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ ಎಂದು ರಾಜ್ಯಪಾಲರಿಗೆ ತಿಳಿಸಿದೆ . ವಿಧಾನಸಭೆ ಅಧಿವೇಶನ ಕರೆಯದಿದ್ದರೆ ರಾಜ್ಯದ ಜನತೆ ರಾಜ್ಯಪಾಲರ ನಿವಾಸಕ್ಕೆ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ಗೆಹ್ಲೋಟ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.







