ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬಟ್ಟೆ ಅಂಗಡಿಯಲ್ಲಿ ಬೆಂಕಿ: ಲಕ್ಷಾಂತರ ರೂ. ನಷ್ಟ

ಚಿಕ್ಕಮಗಳೂರು, ಜು.26: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಬಟ್ಟೆ ಅಂಗಡಿಯೊಂದರಲ್ಲಿ ಹೊತ್ತಿಕೊಂಡ ಬೆಂಕಿಯಿಂದಾಗಿ ಇಡೀ ಅಂಗಡಿ ಸುಟ್ಟು ಹೋಗಿರುವ ಘಟನೆ ನಗರದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ರವಿವಾರ ವರದಿಯಾಗಿದೆ.
ಎಂಜಿ ರಸ್ತೆಯಲ್ಲಿರುವ ಪ್ರಕಾಶ್ ಎಂಬವರಿಗೆ ಸೇರಿದ ಬಟ್ಟೆ ಅಂಗಡಿಯಲ್ಲಿ ರವಿವಾರ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಬಟ್ಟೆ ಅಂಗಡಿ ಬಹುತೇಕ ಸುಟ್ಟು ಹೋಗಿದ್ದು, ಅಂಗಡಿಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಬಟ್ಟೆಗಳು ಪೀಠೋಪಕರಣ ಸೇರಿದಂತೆ ಸುಟ್ಟು ಕರಕಲಾಗಿದೆ.
ಬೆಳಗ್ಗೆ ಅಂಗಡಿಯಿಂದ ಧಟ್ಟ ಹೊಗೆ ಬರುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಅಂಗಡಿ ಮಾಲಕರು ಹಾಗೂ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಬೆಂಕಯನ್ನು ನಂದಿಸಿ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸುವುದನ್ನು ತಡೆದರು.
ಬಟ್ಟೆ ಅಂಗಡಿಯಲ್ಲಿನ ಬೆಂಕಿ ನಂದಿವಷ್ಟರಲ್ಲಿ ಅಂಗಡಿಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಹೋಗಿದ್ದರಿಂದ ಮಾಲಕರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿಕೊಳ್ಳಲಾಗಿದೆ.






.jpg)
.jpg)
.jpg)

