45 ಲಕ್ಷ ರೂ. ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು, ಜು.26: ಪ್ರತಿನಿತ್ಯ ಹಣ ಸಂಗ್ರಹ ಮಾಡಿಕೊಂಡು ಕಾರಿನಲ್ಲಿ ಹೋಗುತ್ತಿದ್ದ ಐಟಿಸಿ ಕಂಪೆನಿಯ ಉದ್ಯೋಗಿಯೋರ್ವನನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ 45.5 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದ ಆರೋಪ ಪ್ರಕರಣ ಸಂಬಂಧ ನಾಲ್ವರನ್ನು ಇಲ್ಲಿನ ಪುಲಿಕೇಶಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದರೋಡೆ ಮಾಡಿದ 45.5 ಲಕ್ಷ ರೂ. ಹಣದಲ್ಲಿ ತನ್ನ ಪಾಲು ಪಡೆದಿದ್ದ ಸಾರಾಯಿಪಾಳ್ಯದ ನಿವಾಸಿ ಆರೋಪಿ ಮುಹಮ್ಮದ್ ಇಶಾದ್(25) ಅದನ್ನು ಕಾರಿನ ಚಕ್ರದಡಿ ಬಚ್ಚಿಟ್ಟಿದ್ದ. ಇನ್ನು, ಆರೋಪಿ ಇಶಾದ್ ಜತೆ ಥಣಿಸಂದ್ರದ ನಿವಾಸಿಗಳಾದ ಫರ್ವೇಝ್, ಅತ್ನಾನ್(19), ಅಘ್ಘನ್ ಪಾಶಾ(19)ನನ್ನು ಬಂಧಿಸಿ ದರೋಡೆ ಮಾಡಿದ್ದ 45.5 ಲಕ್ಷದಲ್ಲಿ 33,85,500 ರೂ.ಗಳು, ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಟಿ ಶರಣಪ್ಪ ಅವರು ತಿಳಿಸಿದ್ದಾರೆ.
ಜೂ.11 ರಂದು ಶಾಂತಿನಗರ ವ್ಯಾಪ್ತಿಯ ಪಾಟರಿ ರಸ್ತೆಯಲ್ಲಿ ಐಟಿಸಿ ಕಂಪೆನಿಯ ಉದ್ಯೋಗಿ ರಾಕೇಶ್ ಪೋಕರ್ಣ ಅವರು ಪ್ರತಿದಿನದ ಹಣ ಸಂಗ್ರಹಿಸಿ ಅದನ್ನು ಕಾರಿನಲ್ಲಿಟ್ಟುಕೊಂಡು ಸಂಜೆ 5ರ ವೇಳೆ ಹೋಗುತ್ತಿದ್ದಾಗ ಬೈಕ್‍ಗಳಲ್ಲಿ ಹಿಂಬಾಲಿಸಿದ ಆರೋಪಿಗಳು ಕಾರು ಅಡ್ಡಹಾಕಿ ಚಾಕು ತೋರಿಸಿ 45.5 ಲಕ್ಷ ರೂ. ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.





