ಬಿಜೆಪಿ ನಾಯಕನ ಫಾರ್ಮ್ ಹೌಸ್ ನಲ್ಲಿ ವೇಶ್ಯಾವಾಟಿಕೆ ದಂಧೆ: ಪೊಲೀಸರ ದಾಳಿ

ಹೊಸದಿಲ್ಲಿ: ಬಿಜೆಪಿ ನಾಯಕನೊಬ್ಬನ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿತ್ತು ಎನ್ನಲಾದ ವೇಶ್ಯಾವಾಟಿಕೆ ದಂಧೆಯ ಮೇಲೆ ಆಗ್ರಾ ಪೊಲೀಸರು ದಾಳಿ ನಡೆಸಿದ್ದು, ಹಲವರನ್ನು ಬಂಧಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷನ ಫಾರ್ಮ್ ಹೌಸ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ ಈ ಆರೋಪವನ್ನು ಬಿಜೆಪಿ ನಾಯಕ ನಿರಾಕರಿಸಿದ್ದು, “ನಾನು ಲೀಸ್ ಗೆ ಫಾರ್ಮ್ ಹೌಸನ್ನು ನೀಡಿದ್ದೆ. ನನಗೂ ಇದಕ್ಕೂ ಸಂಬಂಧವಿಲ್ಲ” ಎಂದಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿದ ಆಗ್ರಾ ಎಸ್ಎಸ್ ಪಿ ಬಬ್ಲು ಕುಮಾರ್, “ಮಹಿಳೆಯರನ್ನು ಮೊದಲು ಫಾರ್ಮ್ ಹೌಸ್ ಗೆ ಕರೆತರಲಾಗುತ್ತಿತ್ತು. ನಂತರ ವಿವಿಧ ಹೋಟೆಲ್ ಗಳಿಗೆ ಅವರನ್ನು ಕಳುಹಿಸಲಾಗುತ್ತಿತ್ತು” ಎಂದಿದ್ದಾರೆ ಎಂದು indiatoday.in ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೂವರು ಮಹಿಳೆಯರು ಸೇರಿದಂತೆ 9 ಮಂದಿಯ ವಿಚಾರಣೆ ನಡೆಸಲಾಗುತ್ತಿದೆ. ತನ್ನನ್ನು ಪೊಲೀಸರು ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ ಎನ್ನುವ ಬಿಜೆಪಿ ನಾಯಕನ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್ಎಸ್ ಪಿ, “ಫಾರ್ಮ್ ಹೌಸ್ ನಲ್ಲಿ ಏನು ನಡೆಯುತ್ತಿದೆ ಎನ್ನುವುದು ಬಿಜೆಪಿ ನಾಯಕನಿಗೆ ತಿಳಿದಿತ್ತು ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ” ಎಂದಿದ್ದಾರೆ.





