ಯಡಿಯೂರಪ್ಪ ಸರಕಾರಕ್ಕೆ ಒಂದು ವರ್ಷ: ಸೋಮವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಕಾರ್ಯಕ್ರಮ
ಸಮಾರಂಭದ ನೇರ ಪ್ರಸಾರಕ್ಕೆ ವ್ಯವಸ್ಥೆ

ಬೆಂಗಳೂರು, ಜು. 26: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಸಂದರ್ಭದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದ ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿದೆ.
ಇದು ರಾಜ್ಯ ಸರಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಸರಳ ವರ್ಚ್ಯವಲ್ ಪ್ಲಾಟ್‍ಫಾರಂ (ವಾಸ್ತವ ವೇದಿಕೆ) ಸಮಾರಂಭ. ವಿಧಾನಸೌಧದ ಔತಣ ಸಭಾಂಗಣದಲ್ಲಿ 150 ಅಡಿ ವಿಶಾಲ ಪರದೆಯ ಮೇಲೆ ಏಕಕಾಲಕ್ಕೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಡೆಯಲಿರುವ ಈ ಸಮಾರಂಭವನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇದರ ನೇರ ಪ್ರಸಾರ ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಈ ನೇರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು.
ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಯೋಜನೆಯ ಫಲಾನುಭವಿಗಳು ಮುಖ್ಯಮಂತ್ರಿಗಳೊಂದಿಗೆ ಆನ್‍ಲೈನ್ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವರು. ರಾಜ್ಯದಲ್ಲಿ ಒಂದು ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದೆ ಆಗಬೇಕಾದ ಕೆಲಸಗಳು, ಪ್ರವಾಹ ಪರಿಹಾರ ಮತ್ತು ಕೋವಿಡ್-19 ಸೋಂಕು ನಿಯಂತ್ರಣ ಸೇರಿದಂತೆ ಅನೇಕ ವಿಷಯಗಳ ಕುರಿತು ರಾಜ್ಯದ ಜನರನ್ನು ಉದ್ದೇಶಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದ ನೇರಪ್ರಸಾರವನ್ನು ಯೂಟ್ಯೂಬ್ ಲಿಂಕ್ ಮೂಲಕ ವೀಕ್ಷಿಸಬಹುದಾಗಿದೆ. ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯ ಸವಾಲುಗಳ ಒಂದು ವರ್ಷ-ಪರಿಹಾರದ ಸ್ಪಶ; ಪುಸ್ತಕ, ಇಲಾಖೆಯ ಜನಪದ ಹಾಗೂ ಮಾರ್ಚ್ ಆಫ್ ಕರ್ನಾಟಕ ಮಾಸಿಕಗಳ ವಿಶೇಷ ಸಂಚಿಕೆಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡುವರು. ಅಲ್ಲದೆ, ಒಂದು ವರ್ಷದ ಸಾಧನೆಗಳ ಕುರಿತು ಕಿರುಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.







