ಸೈನಿಕರ ಛಲ, ಆತ್ಮವಿಶ್ವಾಸದಿಂದ ಕಾರ್ಗಿಲ್ ಗೆಲುವು: ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಇಂದಾವರ ಕೃಷ್ಣೇಗೌಡ

ಚಿಕ್ಕಮಗಳೂರು, ಜು.24: ಪಾಕಿಸ್ತಾನದ ಸೈನಿಕರನ್ನು ನಮ್ಮ ನೆಲದಿಂದ ಓಡಿಸಿಯೇ ತೀರುತ್ತೇವೆಂಬ ನಮ್ಮ ದೃಢವಾದ ಆತ್ಮ ವಿಶ್ವಾಸ ಮತ್ತು ಛಲದಿಂದಾಗಿ ಕಾರ್ಗಿಲ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು ಎಂದು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೇನೆಯ ನಿವೃತ್ತ ಕ್ಯಾಪ್ಟನ್ ಇಂದಾವರ ಕೃಷ್ಣೇಗೌಡ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ರವಿವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 1999ರಲ್ಲಿ ಪಾಕಿಸ್ತಾನದ ಸೈನಿಕರು ಮತ್ತು ಉಗ್ರಗಾಮಿಗಳು ಕಳ್ಳರಂತೆ ಒಳನುಸುಳಿ ಕಾರ್ಗಿಲ್ ಬೆಟ್ಟವನ್ನು ಆಕ್ರಮಿಸಿಕೊಂಡಿದ್ದರು. ಅಲ್ಲಿನ ಪ್ರತಿಕೂಲ ಹವಾಮಾನ ಮತ್ತು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಶತ್ರುಗಳನ್ನು ಓಡಿಸುವುದು ಅಷ್ಟು ಸುಲಭವಾಗಿರಲಿಲ್ಲ, ಆ ಕೆಲಸ ಸೈನಿಕರಿಗೆ ಸವಾಲಾಗಿತ್ತು. “0” ಡಿಗ್ರಿಯಲ್ಲಿದ್ದ ಮೈಕೊರೆಯುವ, ರಕ್ತವನ್ನು ಹೆಪ್ಪುಗಟ್ಟಿಸುವ ಚಳಿ, ಸಾವಿರಾರು ಅಡಿ ಎತ್ತರದ ಹಿಮವನ್ನು ಹೊದ್ದ ಕಡಿದಾದ ಬೆಟ್ಟದಲ್ಲಿ ಕತ್ತಲಲ್ಲಿ ಗುಂಡಿಗಳನ್ನು ತೋಡುತ್ತಾ, ಆಪರೇಷನ್ ವಿಜಯ ಹೆಸರಿನಲ್ಲಿ ನಾವು ಪ್ರಾಣದ ಹಂಗು ತೊರೆದು ಗುಡ್ಡವನ್ನು ಏರಿದೆವು. ಸಣ್ಣ ಕಲ್ಲು ಉರುಳಿದರೂ ನಾವು ಬದುಕುವ ಸ್ಥಿತಿ ಇರಲಿಲ್ಲ ಎಂದು ತಿಳಿಸಿದರು.
ಪ್ರತಿಕೂಲ ಹವಮಾನದ ನಡುವೆ ಊಟ, ತಿಂಡಿ ಸೇರಿದಂತೆ ಯಾವುದನ್ನು ಲೆಕ್ಕಿಸದೆ ಬೆಟ್ಟವೇರಿದ ನಮಗೆ ಇಂದಲ್ಲ ನಾಳೆ, ಪಾಪಿ ಪಾಕಿಸ್ತಾನ ಸೈನಿಕರನ್ನು ನಮ್ಮ ನೆಲದಿಂದ ಓಡಿಸುವ ದೃಢವಾದ ಆತ್ಮವಿಶ್ವಾಸವಿತ್ತು. ಕಾರ್ಗಿಲ್ ಬೆಟ್ಟದಲ್ಲಿ ಮತ್ತೆ ಭಾರತದ ಬಾವುಟವನ್ನು ಹಾರಿಸುವುದಷ್ಟೇ ಆಗ ನಮ್ಮ ಗುರಿಯಾಗಿತ್ತು ಎಂದು ಹೇಳಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಯೋಧರ ಶ್ರಮ ಮತ್ತು ಬಲಿದಾನ ಮತ್ತು ವಿಜಯವನ್ನು ಸ್ಮರಿಸುವ ಉದ್ದೇಶದಿಂದ ಪ್ರತೀವರ್ಷ ಕಾರ್ಗಿಲ್ ವಿಜಯೋತ್ಸವವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ತಲೆ ತಗ್ಗಿಸುವ ಸಂಗತಿ ಎಂದರು. ರಾಜ್ಯ ಅರಣ್ಯ ವಸತಿ ನಿಗಮದ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಕಾರ್ಗಿಲ್ ಯುದ್ಧವನ್ನು ಗೆದ್ದ ದಿನ ದೇಶದ ಜನತೆ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದ ದಿನ ಎಂದರು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಅವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚಾರಣೆ ಮಾಡಲಾಯಿತು. ವಿಜಯೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಕೆಪಿಸಿಸಿ ಮಹಿಳಾ ವಿಭಾಗದ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ, ಜೆ.ವಿನಾಯಕ, ರಾಹೀಲ್ ಶರೀಫ್ ಉಪಸ್ಥಿತರಿದ್ದರು.







