ವೀರ ಯೋಧರನ್ನು ಗೌರವದಿಂದ ಕಾಣಬೇಕು: ಇಮಾಮ್ ಅಹ್ಮದ್ ರಝಾ ಮೂವ್ಮೆಂಟ್ ಅಧ್ಯಕ್ಷ ಸಾದಿಕ್ ಇರ್ಶಾದ್
ಬೆಂಗಳೂರು, ಜು.26: ದೇಶಕ್ಕಾಗಿ ಪ್ರಾಣವನ್ನೇ ಬಲಿದಾನ ಮಾಡುವ ದೇಶದ ವೀರಯೋಧರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಎಂದು ಇಮಾಮ್ ಅಹ್ಮದ್ ರಝಾ ಮೂವ್ಮೆಂಟ್ ಅಧ್ಯಕ್ಷ ಸೆಯ್ಯದ್ ಸಾದಿಕ್ ಇರ್ಶಾದ್ ನುಡಿದರು.
ರವಿವಾರ ನಗರದ ಟ್ಯಾನರಿ ರಸ್ತೆಯ ಇಮಾಮ್ ಅಹ್ಮದ್ ರಝಾ ಮೂಮ್ಮೆಂಟ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1999ರಲ್ಲಿ ಭಾರತ ಮತ್ತು ಪಾಕಿಸ್ತಾನ ಯೋಧರ ನಡುವೆ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯು ವಿಜಯ ಪತಾಕೆ ಹಾರಿಸಿದ ಸವಿನೆನಪಿಗೆ ಮತ್ತು ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುವ ಉದ್ದೇಶದಿಂದ ದೇಶದೆಲ್ಲೆಡೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕಾರ್ಗಿಲ್ ಪ್ರದೇಶವನ್ನು ಭಾರತದ ವಶಕ್ಕೆ ಪಡೆದುಕೊಳ್ಳಲು 500ಕ್ಕೂ ಹೆಚ್ಚು ಯೋಧರು ವೀರ ಮರಣವನ್ನಪ್ಪಿದ್ದಾರೆ. ನಮ್ಮ ಯೋಧರ ಧೈರ್ಯವನ್ನು ವಿಶ್ವದ ಅನೇಕ ರಾಷ್ಟ್ರಗಳು ಕೊಂಡಾಡುತ್ತಿವೆ ಎಂದ ಅವರು, ದೇಶಕ್ಕಾಗಿ ಹಗಲು-ರಾತ್ರಿ, ಮಳೆ, ಬಿಸಿಲೆನ್ನದೆ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಿರುವ ಯೋಧರ ಬಗ್ಗೆ ಯುವ ಪೀಳಿಗೆ ಗೌರವದಿಂದ ಕಾಣಬೇಕು ಎಂದು ಹೇಳಿದರು.





