ಅದೃಶ್ಯ ಶತ್ರುವಿನ ವಿರುದ್ಧ ನಾವು ಹೋರಾಡಬೇಕಿದೆ: ಕೊರೋನ ವೈರಸ್ ಕುರಿತು ಆರ್‌ಬಿಐ ಗವರ್ನರ್

ಹೊಸದಿಲ್ಲಿ, ಜು. 27: ಕೃಷಿ ಕ್ಷೇತ್ರದಲ್ಲಿ ದೇಶೀಯ ಮುಕ್ತ ವ್ಯಾಪಾರವನ್ನು ಉತ್ತೇಜಿಸಲು ನಡೆಯುತ್ತಿರುವ ಪ್ರಮುಖ ಆರ್ಥಿಕ ಸುಧಾರಣೆಗಳ ಮೇಲೆ ಭಾರತ ಬಂಡವಾಳ ಹೂಡಬೇಕಾದ ಅಗತ್ಯ ಇದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಸೋಮವಾರ ಹೇಳಿದ್ದಾರೆ.
ಕೃಷಿ ಹಾಗೂ ಡೈರಿ ಉತ್ಪಾದನೆಯಲ್ಲಿ ಭಾರತ ಜಗತ್ತಿನ ಪ್ರಮುಖ ದೇಶಗಳಲ್ಲಿ ಒಂದಾಗಿ ಹೊರ ಹೊಮ್ಮುತ್ತಿದೆ ಎಂದು ಅವರು ಹೇಳಿದ್ದಾರೆ. ಇಂಡಿಯನ್ ಇಂಡಸ್ಟ್ರಿ ನ್ಯಾಶನಲ್ ಕೌನ್ಸಿಲ್‌ನ ಒಕ್ಕೂಟದಲ್ಲಿ ಮಾತನಾಡಿದ ದಾಸ್, ಕೊರೋನ ವೈರಸ್ ಸೋಕು ಹರಡುತ್ತಿರುವುದರಿಂದ ಆರ್ಥಿಕತೆಗೆ ಉಂಟಾದ ಹಾನಿ ದೇಶಕ್ಕೆ ಅತಿ ದೊಡ್ಡ ಸವಾಲನ್ನು ಒಡ್ಡಿದೆ. ಆದುದರಿಂದ ಆರ್ಥಿಕತೆಯಲ್ಲಿ ಮಧ್ಯಮ ಅವಧಿಯ ದೃಷ್ಟಿಕೋನವನ್ನು ಅನುಸರಿಸಬೇಕಾದ ಅಗತ್ಯ ಇದೆ ಎಂದರು.
ಜೀವ ಹಾಗೂ ಜೀವನದ ರಕ್ಷಣೆ, ಆರ್ಥಿಕ ಪುನಶ್ಚೇತನದ ವಿಚಾರ ನಮ್ಮನ್ನು ದಿನನಿತ್ಯ ಕಾಡುತ್ತಿದೆ. ಈ ಪ್ರಶ್ನೆಗಳಿಗೆ ನಮ್ಮಲ್ಲಿ ವಿಶ್ವಾಸಾರ್ಹ ಉತ್ತರ ಇಲ್ಲ. ನಾವು ಈ ಅದೃಶ್ಯ ಶತ್ರುವಿನ ವಿರುದ್ಧ ಪಟ್ಟು ಬಿಡದೆ ಹೋರಾಟ ನಡೆಸಬೇಕು ಎಂದು ಅವರು ಹೇಳಿದರು. ಭಾರತದ ಆರ್ಥಿಕತೆಯಲ್ಲಿ ನಡೆಯುತ್ತಿರುವ ಐದು ಪ್ರಮುಖ ಬದಲಾವಣೆಗಳ ಬಗ್ಗೆ ಅವರು ಮಾತನಾಡಿದರು. ಅದೃಷ್ಟದ ವಿಚಾರ ಎಂದರೆ, ನಮ್ಮಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಒಲವು ಮೂಡುತ್ತಿದೆ. ಅಲ್ಲದೆ, ನವೀಕರಿಸಬಹುದಾದ ಇಂಧನದ ಬಗ್ಗೆ ಯೋಚಿಸಲು ಆರಂಭಿಸಿದ್ದೇವೆ ಎಂದು ದಾಸ್ ಹೇಳಿದರು.
ಕೃಷಿ ಆದಾಯದಲ್ಲಿ ಸುಸ್ಥಿರ ಏರಿಕೆ ಹಾಗೂ ಹೆಚ್ಚುವರಿ ಕೃಷಿ ಇಳುವರಿಯ ನಿರ್ವಹಣೆಗೆ ಭಾರತ ಹೊಸ ನೀತಿ ರೂಪಿಸಬೇಕಿದೆ ಎಂದು ಅವರು ತಿಳಿಸಿದರು. ನಮ್ಮ ಉತ್ಪಾದನೆ ಹಾಗೂ ಸೇವೆಗಳ ಗುಣಮಟ್ಟ ಹಾಗೂ ಉತ್ಪಾದಕತೆ ಮೇಲೆ ಗಮನ ಕೇಂದ್ರೀಕರಿಸಬೇಕು. ಜಾಗತಿಕ ವೌಲ್ಯದ ಸರಪಳಿಯಲ್ಲಿ ಭಾಗವಹಿಸುವುದನ್ನು ಹೆಚ್ಚಿಸುವುದರೊಂದಿಗೆ ಒಂದು ದೇಶ ತನ್ನ ತಲಾ ಆದಾಯವನ್ನು ಹೆಚ್ಚಿಸಬಹುದು ಎಂದು ವಿಶ್ವ ಬ್ಯಾಂಕ್‌ನ 2020ರ ವರದಿ ತಿಳಿಸಿದೆ ಎಂದು ಅವರು ಹೇಳಿದರು.







