ಉಡುಪಿ ಜಿಲ್ಲೆಯಲ್ಲಿ ಮತ್ತೆ ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ: ಸೋಮವಾರ 225 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಜು.27: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಸೋಮವಾರ ಮತ್ತೆ ಜಿಲ್ಲೆಯಲ್ಲಿ ಪಾಸಿಟಿವ್ ಬಂದವರ ಸಂಖ್ಯೆ ದ್ವಿಶತಕದ ಗಡಿಯನ್ನು (225)ನ್ನು ದಾಟಿದೆ. ದಿನದಲ್ಲಿ 286 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.
ಇಂದು ಕೊರೋನ ಸೋಂಕು ಪತ್ತೆಯಾದ 225 ಮಂದಿಯಲ್ಲಿ ಉಡುಪಿ ತಾಲೂಕಿನ 68 ಮಂದಿ, ಕುಂದಾಪುರ ತಾಲೂಕಿನ 115 ಮಂದಿ ಹಾಗೂ ಕಾರ್ಕಳ ತಾಲೂಕಿನ 42 ಮಂದಿ ಸೇರಿದ್ದಾರೆ. 121 ಮಂದಿ ಪುರುಷರು, 91 ಮಂದಿ ಮಹಿಳೆಯರು ಹಾಗೂ 10 ವರ್ಷದೊಳಗಿನ ಪ್ರಾಯದ 7 ಬಾಲಕರು ಹಾಗೂ 6 ಮಂದಿ ಬಾಲಕಿಯರು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇಂದಿನ 225 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 3613ಕ್ಕೇರಿದೆ ಎಂದರು.
51 ಮಂದಿ ಗುಣಮುಖ: ಜಿಲ್ಲೆಯಲ್ಲಿ ಸೋಮವಾರ ಒಟ್ಟು 51 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಕುಂದಾಪುರ ಆಸ್ಪತ್ರೆಯ 24, ಕಾರ್ಕಳ ಆಸ್ಪತ್ರೆಯ 17, ಟಿಎಂಎ ಪೈ ಆಸ್ಪತ್ರೆಯ 5 ಹಾಗೂ ಉಡುಪಿ ಎಎನ್‌ಎಂ ತರಬೇತಿ ಕೇಂದ್ರದ ಐವರು ಸೇರಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 2184ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 1415 ಮಂದಿ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಬಂದರೂ, ರೋಗದ ಗುಣಲಕ್ಷಣಗಳಿಲ್ಲದ 41 ಮಂದಿ ಇಂದು ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆಗೆ ಮುಂದಾಗಿದ್ದಾರೆ. ಇದರಿಂದ ಈವರೆಗೆ ಒಟ್ಟು 667 ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಮುಂದುವರಿಸಿದಂತಾಗಿದೆ ಎಂದು ಡಾ.ಸೂಡ ತಿಳಿಸಿದರು.
223 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಸೋಮವಾರ 223 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 117 ಮಂದಿ, ಕೋವಿಡ್ ಸಂಪರ್ಕಿತರು 66 ಮಂದಿ ಇದ್ದರೆ, ಉಸಿರಾಟ ತೊಂದರೆಯ ಇಬ್ಬರು, ಶೀತಜ್ವರದಿಂದ ಬಳಲುವ 36 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ ಇಬ್ಬರ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಇಂದು ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 28,510ಕ್ಕೇರಿದೆ. ಇವುಗಳಲ್ಲಿ ಈವರೆಗೆ 24,621 ನೆಗೆಟಿವ್, 3613 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 17 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 276 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.
ಜಿಲ್ಲೆಯಲ್ಲಿ ಸೋಮವಾರ 42 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ 12 ಮಂದಿ ಕೋವಿಡ್ ಶಂಕಿತರು, 15 ಮಂದಿ ಉಸಿರಾಟ ತೊಂದರೆಯವರು ಹಾಗೂ 15 ಮಂದಿ ಶೀತಜ್ವರದಿಂದ ಬಳಲುವವರು ಸೇರಿದ್ದಾರೆ ಎಂದರು.
ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 41 ಮಂದಿ ಬಿಡುಗಡೆಗೊಂಡಿದ್ದು, 261 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 121 ಮಂದಿ ಸೇರಿದಂತೆ ಒಟ್ಟು 7690 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1525 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಕುಂದಾಪುರ ಕೇರ್ ಸೆಂಟರ್‌ಗೆ 55 ಮಂದಿ
ಕೊರೋನಾದ ರೋಗಲಕ್ಷಣಗಳಿಲ್ಲದೇ ಪಾಸಿಟಿವ್ ಬಂದಿರುವ ಸೋಂಕಿತರಿಗಾಗಿ ಮನೆಯ ವಾತಾವರಣದಲ್ಲಿ ಚಿಕಿತ್ಸೆ ನೀಡಲು ಕುಂದಾಪುರದಲ್ಲಿ ಪ್ರಾರಂಭಿಸಿರುವ ಕೋವಿಡ್ ಹೋಮ್ ಕೇರ್ ಸೆಂಟರ್‌ಗೆ ಕೇವಲ ಒಂದು ದಿನದಲ್ಲಿ 55 ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಹಾಗೂ ಈ ಕೇಂದ್ರದ ರೂವಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಕುಂದಾಪುರದ ದೇವರಾಜ ಅರಸು ಹಿಂದುಳಿದ ವರ್ಗಗಳ ಹಾಸ್ಟೆಲ್‌ನ್ನು 75 ಬೆಡ್‌ಗಳ ಹೋಮ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ಸೋಂಕಿತರಿಗೆ ಉಚಿತ ವೈದ್ಯಕೀಯ ಸೇವೆಯೂ ಸೇರಿದಂತೆ ಇಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ.







