ಪುತ್ರಿಯ ಆನ್ ಲೈನ್ ಶಿಕ್ಷಣ: ತನ್ನ ಆದಾಯಕ್ಕಿಂತಲೂ ಅಧಿಕ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸಿದ ಕಾರು ತೊಳೆಯುವ ವ್ಯಕ್ತಿ
ವೈದ್ಯೆಯಾಗುವ ಕನಸು ಕಂಡ ಪ್ರತಿಭಾವಂತೆಗೆ ತಂದೆಯ ಸಾಥ್

ಗದಗ, ಜು. 27: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪುತ್ರಿಗೆ ಕಾರು ತೊಳೆಯುವ ಕೆಲಸ ಮಾಡುವ ತಂದೆ ತನ್ನ ಆದಾಯಕ್ಕಿಂತಲೂ ಅಧಿಕ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸಿದ್ದಾರೆ.
ಉತ್ತರ ಕರ್ನಾಟಕದ ಗದಗದ ಶಂಸುದ್ದೀನ್ ಅಧೋನಿ ಅವರಿಗೆ ಮೂವರು ಪುತ್ರಿಯರು. ಅವರಲ್ಲಿ ಹಿರಿಯ ಪುತ್ರಿ ಝೀನತ್ ಬಾನು ಪಿಯುಸಿಯಲ್ಲಿ ಶೇ. 94 ಅಂಕ ಗಳಿಸಿದ್ದಾರೆ. ಅವರು ಪಿಯುಸಿಯಲ್ಲಿ ಪಿಸಿಎಂಬಿ ಆಯ್ಕೆ ಮಾಡಿಕೊಂಡಿದ್ದರು.
ಝೀನತ್ ಅವರು ಈ ವಾರಾಂತ್ಯದಲ್ಲಿ ಕರ್ನಾಟಕದ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಇರುವ ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಲಿದ್ದಾರೆ. ಝೀನತ್ ಅವರ ಕನಸು ವೈದ್ಯೆಯಾಗುವುದು. ಅವರು ನೀಟ್ ಪರೀಕ್ಷೆಗೆ ಕೂಡ ಹಾಜರಾಗಬೇಕಿದೆ. ಆದರೆ, ಝೀನತ್ ಗೆ ಹಲವು ಸವಾಲುಗಳಿದ್ದವು.
ಕೊರೋನ ವೈರಸ್ ಸೋಂಕು ಹರಡುತ್ತಿರುವುದರಿಂದ ಹಲವು ತರಬೇತಿ, ಶಿಕ್ಷಣ ಆನ್ ಲೈನಲ್ಲಿ ನಡೆಯುತ್ತಿದೆ. ಆನ್ ಲೈನ್ ಕ್ಲಾಸ್ ನಲ್ಲಿ ಪಾಲ್ಗೊಳ್ಳಲು ಝೀನತ್ ಅವರಲ್ಲಿ ಸ್ಮಾರ್ಟ್ ಫೋನ್ ಇರಲಿಲ್ಲ. ಅವರ ಕುಟುಂಬದಲ್ಲಿ ಇದ್ದುದು ಸಾಧಾರಣ ಮೊಬೈಲ್ ಪೋನ್. ಗದಗದಲ್ಲಿ ಕಾರು ತೊಳೆಯುವ ಕೆಲಸ ಮಾಡುವ ಶಂಸುದ್ದೀನ್ ಅಧೋನಿಗೆ ತಿಂಗಳಿಗೆ ಸಿಗುತ್ತಿದ್ದ ಸಂಬಳ ಕೇವಲ 6 ಸಾವಿರ ರೂಪಾಯಿ. ಆದರೂ ಅವರು ತನ್ನ ಪುತ್ರಿಯ ಶಿಕ್ಷಣಕ್ಕೆ ನೆರವಾಗಲು ನಿರ್ಧರಿಸಿದರು. ತನ್ನ ಸಂಬಂಧಿಕರು ಹಾಗೂ ಕುಟುಂಬದವರಿಂದ ಸಾಲ ಪಡೆದರು. ಪತ್ನಿಯ ಚಿನ್ನಾಭರಣಗಳನ್ನು ಮಾರಿದರು. ಅದರಿಂದ ಬಂದ ಹಣವನ್ನು ಝೀನತ್ ಹಾಗೂ ಅವರ ತಂಗಿಯಂದಿರಾದ ಹುಮೇರಾ ಹಾಗೂ ಶಗುಫ್ತಾ ಅವರ ಶಿಕ್ಷಣಕ್ಕೆ ಬಳಸುತ್ತಿದ್ದಾರೆ. ಈಗ ಮೂವರು ಸಹೋದರಿಯರೂ ಕೂಡ ಆನ್ ಲೈನ್ ಕ್ಲಾಸ್ಗೆ ಹಾಜರಾಗುತ್ತಿದ್ದಾರೆ. ‘ಈ ಮೊಬೈಲ್ ಪೋನ್ ನಮ್ಮ ಕುಟುಂಬದ ಬಜೆಟ್ ಗಿಂತ ಹೆಚ್ಚಾಗಿದೆ. ಆದರೆ, ಇದರಿಂದ ಪುತ್ರಿಯರು ಆನ್ ಲೈನ್ ಕ್ಲಾಸ್ ಗೆ ಹಾಜರಾಗಲು ಅನುಕೂಲವಾಗಿದೆ’ ಎಂದು ಶಂಸುದ್ದೀನ್ ಅಧೋನಿ ಹೇಳಿದ್ದಾರೆ.
ಕೊರೋನ ಸೋಂಕು ಹರಡುತ್ತಿರುವುದರಿಂದ, ಲಾಕ್ ಡೌನ್ ಇರುವುದರಿಂದ ಹಲವು ವಿದ್ಯಾರ್ಥಿಗಳು ಹಾಗೂ ಕುಟುಂಬಗಳು ಸವಾಲು ಎದುರಿಸುತ್ತಿವೆ.







