ಕೋವಿಡ್19: ಬೆಂಗಳೂರು ನಗರದಲ್ಲಿಂದು 26 ಮಂದಿ ಮೃತ, 1,470 ಪ್ರಕರಣಗಳು ದೃಢ

ಬೆಂಗಳೂರು, ಜು.27: ನಗರದಲ್ಲಿ ಸೋಮವಾರ 1,470 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 26 ಜನರು ಮೃತರಾಗಿದ್ದಾರೆ.
ನಗರದಲ್ಲಿ ಒಟ್ಟು 46,923 ಸೋಂಕಿತರು ಧೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 917 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 12,189 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33,816 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 43,462 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ವಾಕಿಂಗ್ ಹೋಗಿದ್ದ ವ್ಯಕ್ತಿ ಸ್ಥಳದಲ್ಲೇ ಮೃತ: ಪಾರ್ಕ್ ಗೆ ವಾಕಿಂಗ್ ಹೋಗಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ನಗರದ ಆರ್.ಟಿ.ನಗರದಲ್ಲಿ ನಡೆದಿದೆ.
ಸೋಮವಾರ ಪಾರ್ಕ್ ಗೆ ಬಂದಾಗ ಅಲ್ಲೇ ಬಿದ್ದು ವ್ಯಕ್ತಿ ಮೃತಪಟ್ಟಿದ್ದು, ಶವವನ್ನು ಬಿಬಿಎಂಪಿ ಸಿಬ್ಬಂದಿ ಕೊಂಡೊಯ್ದಿದ್ದಾರೆ. ಪಾರ್ಕ್ ಗೆ ಬಂದ ವ್ಯಕ್ತಿ ಹೇಗೆ ಮೃತಪಟ್ಟರು ಎಂಬುದು ತಿಳಿದು ಬಂದಿಲ್ಲ.
20 ಸಾವಿರ ಮಂದಿಗೆ ಆಂಟಿಜೆನ್ ಟೆಸ್ಟ್: ನಗರದಲ್ಲಿ ಕೊರೋನ ಸೋಂಕಿತರನ್ನ ಬೇಗ ಪತ್ತೆ ಹಚ್ಚಲು ಬಿಬಿಎಂಪಿ ಮುಂದಾಗಿದ್ದು, ಪ್ರತಿ ನಿತ್ಯ 20 ಸಾವಿರ ಆಂಟಿಜೆನ್ ಟೆಸ್ಟ್ ನಡೆಸುವ ಗುರಿಯನ್ನು ಹೊಂದಿದೆ.
ಮುಂದಿನ ಎರಡು ತಿಂಗಳು ನಿತ್ಯ 20 ಸಾವಿರ ಮಂದಿಗೆ ಆಂಟಿಜೆನ್ ಟೆಸ್ಟ್ ಮಾಡುವ ಗುರಿ ಹೊಂದಿದ್ದು, ನಗರದಲ್ಲಿ ಇವರೆಗೆ 23,640 ಜನರಿಗೆ ಆಂಟಿಜೆನ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 5,186 ಸೋಂಕಿತರು ಪತ್ತೆಯಾಗಿದ್ದಾರೆ. ಆಂಟಿಜೆನ್ ಟೆಸ್ಟ್‍ನಲ್ಲಿ ಕೇವಲ 20 ನಿಮಿಷದಲ್ಲಿ ವರದಿ ಬರುತ್ತಿದೆ.







