ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಸೆ ನನಗಿಲ್ಲ: ಶಾಸಕ ಹರ್ಷವರ್ಧನ್

ಮೈಸೂರು,ಜ.27: ಶಾಸಕನಾಗಿ ಮಾಡಬೇಕಾಗಿರುವ ಕೆಲಸಗಳೇ ಸಾಕಷ್ಟಿದೆ. ನಾನು ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಸೆ ಪಟ್ಟಿರಲಿಲ್ಲ, ಕೊಟ್ಟಿದ್ದರೆ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ತಿಳಿಸಿದರು.
ಇಂದು 24 ನಿಗಮ ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡಿರುವ ಕುರಿತು 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅವರು, ನಾನು ನಿಗಮ ಮಂಡಳಿ ಆಕಾಂಕ್ಷಿಯಾಗಿರಲಿಲ್ಲ. ತಾನಾಗೆ ಬಂದರೆ ಸಂತೋಷವಾಗಿ ಸ್ವೀಕರಿಸಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ನಿಗಮ ಮಂಡಳಿ ಸ್ಥಾನ ಬೇಕು ಎಂದು ನಾನು ಲಾಭಿ ಮಾಡಿಲ್ಲ ಎಂದು ಹೇಳಿದರು.
ನಾವು ಶಾಸಕರಾಗಿ ಮಾಡಬೇಕಾಗಿರುವ ಕೆಲಸ ಸಾಕಷ್ಟಿದೆ. ನಮಗಿಂತ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ಗುರುತಿಸಿ ಸ್ಥಾನ ನೀಡಬೇಕು. ನನಗೆ ಇದರ ಬಗ್ಗೆ ಆಸಕ್ತಿ ಇಲ್ಲ ಎಂದರು.
ನಂಜನಗೂಡಿನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿರಬಹುದು. ಅದಕ್ಕೆ ಕಾರ್ಯಕರ್ತರ ಶ್ರಮ ಸಾಕಷ್ಟಿದೆ. ಅಂತಹ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ. ಹಾಗಾಗಿ ನಾನು ಯಾವುದೇ ನಿಗಮ ಮಂಡಳಿ ಆಸೆ ಪಟ್ಟಿಲ್ಲ ಎಂದು ಹೇಳಿದರು.







