ಕೊರೋನ ಸೋಂಕಿತರ ಪರೀಕ್ಷೆ, ಚಿಕಿತ್ಸೆಯಲ್ಲಿ ಲೋಪ ಎಸಗಿಲ್ಲ: ಚಿಕ್ಕಮಗಳೂರು ಜಿಲ್ಲಾಧಿಕಾರಿ
"ಜು.30ಕ್ಕೆ ಕೋವಿಡ್ ಲ್ಯಾಬ್ ಕಾರ್ಯಾರಂಭ"

ಚಿಕ್ಕಮಗಳೂರು, ಜು.27: ಕೋವಿಡ್-19 ಸೋಂಕಿತರ ಪರೀಕ್ಷೆ ಸೇರಿದಂತೆ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಆರೈಕೆ, ಐಸೋಲೇಶನ್ ಕೇಂದ್ರಗಳ ಮೂಲಸೌಕರ್ಯ ಎಲ್ಲವೂ ಗುಣಮಟ್ಟದ್ದಾಗಿದೆ. ಸೋಂಕಿತರ ಪತ್ತೆ ಹಾಗೂ ಪರೀಕ್ಷೆ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಆದರೆ ಕೆಲವರು ಜಿಲ್ಲಾಡಳಿತದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದು, ಸುಳ್ಳನ್ನು ವ್ಯಾಪಕವಾಗಿ ಹರಡುತ್ತಿದ್ದಾರೆ. ಕೋವಿಡ್-19 ಸಂಬಂಧ ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ 17,095 ಮಂದಿಯಿಂದ ಸ್ವಾಬ್ ಸಂಗ್ರಹಿಸಲಾಗಿದೆ. ಈ ಪೈಕಿ 16,108 ಮಂದಿಯ ವರದಿ ನೆಗೆಟಿವ್ ಬಂದಿದ್ದು, 679 ಮಂದಿಯಲ್ಲಿ ಮಾತ್ರ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದ್ದರೆ, ಚಿಕಿತ್ಸೆಯಿಂದ ಗುಣಮುಖರಾದ 376 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋಂಕಿಗೆ ತುತ್ತಾದವರ ಪೈಕಿ 19 ಮಂದಿ ಮೃತ ಪಟ್ಟಿದ್ದು, ಮೃತಪಟ್ಟವರಲ್ಲಿ 39 ವರ್ಷದ ಓರ್ವರಿದ್ದು, ಉಳಿದವರು 52 ವರ್ಷದಿಂದ 76 ವರ್ಷದವರಾಗಿದ್ದಾರೆ. ಮೃತ ಸೋಂಕಿತರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವರಾಗಿದ್ದಾರೆ. ಇನ್ನು ಕೆಲವರು ಸೋಂಕಿನ ಲಕ್ಷಣಗಳಿದ್ದಾಗ್ಯೂ ಕೊನೆ ಗಳಿಗೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಜಿಲ್ಲೆಯಲ್ಲಿ ಸಾವಿನ ಪ್ರಮಾಣವೂ ಅತ್ಯಂತ ಕಡಿಮೆ ಇದೆ ಎಂದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶೇ.4.2 ಇದ್ದು, ಶೇ.55ರಷ್ಟು ಸೋಂಕಿತರು ಗುಣಮುಖರಾಗಿದ್ದು, ಸಾವಿನ ಪ್ರಮಾಣ ಜಿಲ್ಲಾವಾರು ಮೊದಲ 10 ಜಿಲ್ಲೆಗಳ ಪಟ್ಟಿಯಲ್ಲಿ ಚಿಕ್ಕಮಗಳೂರು ಸೇರಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ಪರೀಕ್ಷೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.
ಜಿಲ್ಲೆಯಲ್ಲಿ ಸೋಂಕಿತರ ಪರೀಕ್ಷಾ ವರದಿಗಳು ಹಾಸನ, ಶಿವಮೊಗ್ಗ ಲ್ಯಾಬ್‍ನಿಂದ ಬರಬೇಕಾಗಿರುವುದರಿಂದ ಅಲ್ಲಿನ ಲ್ಯಾಬ್‍ಗಳಲ್ಲಿನ ಒತ್ತಡದಿಂದಾಗಿ ವರದಿಗಳು ತಡವಾಗುತ್ತಿದೆ. ಜಿಲ್ಲೆಯಿಂದ ಕಳುಹಿಸಲಾದ 989 ಜನರ ವರದಿ ಬರುವುದು ಇನ್ನೂ ಬಾಕಿ ಇದೆ. ಈ ಪೈಕಿ ಮಂಗಳೂರಿನ ವೆನ್‍ಲಾಕ್ ಲ್ಯಾಬ್‍ನಿಂದ 400, ಶಿವಮೊಗ್ಗ ಲ್ಯಾಬ್‍ನಿಂದ 300 ಹಾಗೂ ಹಾಸನ ಲ್ಯಾಬ್‍ನಿಂದ 289 ವರದಿಗಳಯ ಬಾಕಿ ಇವೆ ಎಂದರು.
ಸದ್ಯ ಜಿಲ್ಲೆಯಲ್ಲಿ ಲ್ಯಾಬ್ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ಐಸಿಎಂಆರ್ ಅನುಮತಿ ಬಳಿಕ ಪರೀಕ್ಷೆಗಳನ್ನು ಆರಂಭಿಸಲಾಗುವುದು. ಗುರುವಾರದಿಂದ ಲ್ಯಾಬ್ ನಗರದಲ್ಲಿ ಕಾರ್ಯರಂಭ ಮಾಡಲಿದೆ, ಸದ್ಯ ಜಿಲ್ಲೆಯಲ್ಲಿ ರ್ಯಾಪಿಡ್ ಆಂಟಿಜೆನ್ ಕಿಟ್‍ಗಳ ಮೂಲಕ ಶಂಕಿತರ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಗೆ ಇದುವರೆಗೆ 5 ಸಾವಿರ ಕಿಟ್‍ಗಳನ್ನು ಸರಕಾರ ಪೂರೈಕೆ ಮಾಡಿದ್ದು, ಈ ಕಿಟ್‍ಗಳ ಪೂರೈಕೆಯಿಂದಾಗಿ ಜಿಲ್ಲೆಯಲ್ಲಿ ಇದೀಗ ಹೆಚ್ಚು ಸ್ವಾಬ್ ಮಾದರಿಗಳ ಪರೀಕ್ಷೆ ನಡೆಯುತ್ತಿದ್ದು, ಪಾಸಿಟಿವ್‍ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಿಟ್‍ಗಳ ಮೂಲಕ ಮಾಡುವ ಪರೀಕ್ಷೆಯಲ್ಲಿ ಅರ್ಧ ಗಂಟೆಯಲ್ಲಿ ಫಲಿತಾಂಶ ತಿಳಿಯುತ್ತದೆ. ಕಿಟ್ ಮೂಲಕ ಮಾಡಲಾದ ಪರೀಕ್ಷೆಯಲ್ಲಿ ವ್ಯಕ್ತಿಯಲ್ಲಿ "ಎ" ಲಕ್ಷಣಗಳ ಪಾಸಿಟಿವ್ ಬಂದಲ್ಲಿ ಅಂತವರ ಹೇಳಿಕೆ ಆಧಾರದ ಮೇಲೆ ಹೋಂ ಐಸೋಲೇಶ್‍ನ್ ಮಾಡಲಾಗುತ್ತಿದೆ. ಗಂಭೀರ ಲಕ್ಷಣಗಳಿದ್ದಲ್ಲಿ ನಗರದ ಕೋವಿಡ್ ಆಸ್ಪತ್ರೆಗಳಿಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕಿಟ್‍ಗಳ ಮೂಲಕ ಮಾಡಿದ ಪರೀಕ್ಷೆ ಬಳಿಕ ಟ್ರೂ ನಾಟ್ ಪರೀಕ್ಷೆ, ಆರ್‍ಟಿಪಿಸಿಆರ್ ಪರೀಕ್ಷೆ ಸೇರಿ ಮೂರು ಹಂತದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಪಾಸಿಟಿವ್ ಇದ್ದು, ಸೋಂಕಿನ ಲಕ್ಷಣಗಳಿಲ್ಲದವರು ತಮ್ಮನ್ನು ಸುಖಾಸುಮ್ಮನೆ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಪಾಸಿಟಿವ್ ಇರುವ ಮಂದಿ ಇದನ್ನು ಅರ್ಥ ಮಾಡಿಕೊಳ್ಳದೇ ಅಪಪ್ರಚಾರಕ್ಕಿಳಿದಿದ್ದಾರೆ. ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬೇಲೂರು ರಸ್ತೆಯಲ್ಲಿರುವ ಪಾಸಿಟಿವ್ ವ್ಯಕ್ತಿಗಳ ಐಸೋಲೇಶನ್ ಕೇಂದ್ರದಲ್ಲಿ ಮೂಲಸೌಕರ್ಯಗಳಿಲ್ಲ ಎಂದು ಆರೋಪಿಸಿರುವುದರಲ್ಲೂ ಹುರುಳಿಲ್ಲ. ಈ ಕೇಂದ್ರದಲ್ಲಿ ಹಿಂದೆಯೂ ಕ್ವಾರಂಟೈನ್ ಮಾಡಲಾಗಿದ್ದು, ಯಾರೂ ಸೌಲಭ್ಯಗಳ ಬಗ್ಗೆ ಚಕಾರ ಎತ್ತಿಲ್ಲ. ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ಸೋಂಕಿನ ಲಕ್ಷಣಗಳಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಸ್ವಾಬ್ ಪರೀಕ್ಷೆ ನಂತರ ಪಾಸಿಟಿವ್ ಇರುವುದು ತಿಳಿದು ಬಂದಿದೆ. ಆದರೆ ಗ್ರಾಮಸ್ಥರು ಸಕಾಲದಲ್ಲಿ ಆಂಬಲೆನ್ಸ್ ಕಳಿಸಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಸೋಂಕಿನ ಲಕ್ಷಣಗಳಿದ್ದಗ್ಯೂ ಅವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡರಲಿಲ್ಲ ಎಂದರು.
ಜಿಲ್ಲೆಯಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ ಕೊರತೆ ಇದೆ. ಆಶಾ ಕಾರ್ಯಕರ್ತೆಯರು ಧರಣಿ ಮಾಡುತ್ತಿದ್ದಾರೆ. ಇಂತಹ ಸಂದರ್ಭ ಸೋಂಕು ಹೆಚ್ಚುತ್ತಿದ್ದರೂ ಇರುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಹಗಲು ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸಣ್ಣ ತಪ್ಪುಗಳನ್ನೇ ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಮಾಹಿತಿ ಹರಡುವುದರಿಂದ ವೈದ್ಯರಲ್ಲಿ ಆತ್ಮಸ್ಥೈರ್ಯ ಕಡಿಮೆಯಾಗುತ್ತದೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಂಡು ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಬೇಕೆಂದರು.
ಜಿಲ್ಲೆಯಲ್ಲಿ ಸದ್ಯ 50 ಸ್ವಾಬ್ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದೆ. 9 ಫೀವರ್ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿವೆ. ರ್ಯಾಪಿಡ್ ಆಂಟಿಜೆನ್ ಕಿಟ್‍ಗಳ ಮೂಲಕ ಪ್ರತಿದಿನ 800ಕ್ಕೂ ಹೆಚ್ಚು ಶಂಕಿತರ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 375, ಬೇಲೂರು ರಸ್ತೆಯ ಹಾಸ್ಟೆಲ್‍ನಲ್ಲಿ 150 ಹಾಗೂ ಕೆಎಸ್‍ಯು ಕಟ್ಟದಲ್ಲಿ 240 ಹಾಸಿಗೆಗಳು ಸೋಂಕಿತರ ಚಿಕಿತ್ಸೆಗೆ ಸಿದ್ಧವಿದ್ದು, ಜಿಲ್ಲೆಯಲ್ಲಿ 10 ಸಾವಿರ ಸೋಂಕಿತರು ಪತ್ತೆಯಾದರೂ ಚಿಕಿತ್ಸೆ ನೀಡಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಸೋಂಕಿತರಲ್ಲಿ ಎ ಲಕ್ಷಣಗಳಿದ್ದಲ್ಲಿ ಅವರನ್ನು ಮನೆಗಳಲ್ಲೇ ಕ್ವಾರಂಟೈನ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೋಂಕಿತರು ಬಯಸಿದ್ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ದಾಖಲಿಸಲು ಕ್ರಮವಹಿಸಲಾಗುವುದು. ನಗರದಲ್ಲಿ ಸರಕಾರ ಆಯ್ಕೆ ಮಾಡಿರುವ 5 ಆಸ್ಪತ್ರೆಗಳಲ್ಲಿ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಆರ್‍ಎಸ್ ಆಸ್ಪತ್ರೆಯಲ್ಲಿ 13 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಈ ವೇಳೆ ಎಸ್ಪಿ ಹಕಾಯ್ ಅಕ್ಷಯ್ ಮಚ್ಚಿಂದ್ರ, ಎಡಿಸಿ ಡಾ.ಕುಮಾರ್ ಉಪಸ್ಥಿತರಿದ್ದರು.







