ಕಲ್ಲುಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿ ಜು.29 ರಂದು ಮಂಡ್ಯ ಬಂದ್
ಮಂಡ್ಯ, ಜು.27: ಕೆಆರ್‍ಎಸ್ ಅಣೆಕಟ್ಟೆಯ ವ್ಯಾಪ್ತಿಯ ಕಲ್ಲುಗಣಿಗಾರಿಕೆ ಶಾಶ್ವತ ನಿಷಧಕ್ಕೆ ಒತ್ತಾಯಿಸಿ ಹಾಗೂ ಜಿಲ್ಲಾಡಳಿತದ ನಿಷ್ಕ್ರಿಯತೆ ಪ್ರತಿಭಟಿಸಿ ಕಾವೇರಿ-ಕೆಆರ್‍ಎಸ್ ಉಳಿವಿಗಾಗಿ ಜನಾಂದೋಲನ ಸಮಿತಿ ವತಿಯಿಂದ ಜು.29 ರಂದು ಮಂಡ್ಯ ನಗರ ಬಂದ್‍ಗೆ ಕರೆ ನೀಡಲಾಗಿದೆ.
ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರೊ.ಜಿ.ಟಿವೀರಪ್ಪ, ಅಕ್ರಮ ಕಲ್ಲುಗಣಿಗಾರಿಕೆಯಿಂದ ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಿರುವುದರಿಂದ ಜನತೆ ಸಾಮೂಹಿಕವಾಗಿ ಗಣಿಗಾರಿಕೆ ವಿರುದ್ಧ ದನಿ ಎತ್ತುವುದು ಅನಿವಾರ್ಯವಾಗಿದೆ ಎಂದರು.
ಜನಪರ ಸಂಘಟನೆಗಳ ಸಹಭಾಗಿತ್ವದ ಜನಾಂದೋಲನ ಸಮಿತಿ ಹೋರಾಟದ ಫಲವಾಗಿ ಅಣೆಕಟ್ಟೆ ವ್ಯಾಪ್ತಿಯ ಗಣಿಗಾರಿಕೆಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಆದರೆ, ಅಕ್ರಮವಾಗಿ ಗಣಿಗಾರಿಕೆ ಮುಂದುವರಿದಿರುವುದರಿಂದ ಬಂದ್‍ಗೆ ಕರೆ ನೀಡಲಾಗಿದೆ ಎಂದರು.
ಸಾರ್ವಜನಿಕರು, ವರ್ತಕರು, ನೌಕರರು, ಕಾರ್ಮಿಕರು, ರೈತ, ದಲಿತ, ಕನ್ನಡಪರ, ಮಹಿಳಾ, ಸಾಂಸ್ಕೃತಿಕ ಸಂಘಟನೆಗಳು, ಪರಿಸರವಾದಿಗಳು, ಆಟೋ, ಬಸ್, ಕಾರು, ಲಾರಿ ಮಾಲಕರು, ವಿದ್ಯಾರ್ಥಿ ಯುವಜನರು ಬಂದ್‍ಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ವಿವಿಧ ಸಂಘಟನೆಗಳು ಮುಖಂಡರಾದ ಶಿವರಾಮೇಗೌಡ, ಎಂ.ಬಿ.ನಾಗಣ್ಣಗೌಡ, ಕೆ.ಆರ್.ರವೀಂದ್ರ, ಹನುಮಂತು, ಕೃಷ್ಣ, ಇತರರು ಉಪಸ್ಥಿತರಿದ್ದರು.







