ವಿಷಜಂತು ಕಡಿತಕ್ಕೊಳಗಾದ ಯುವಕನಿಗೆ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಪ್ರಕರಣ: ವೈದ್ಯರ ಸಹಿತ ನಾಲ್ವರ ಸಿಬ್ಬಂದಿಯ ಅಮಾನತು

ವಿಜಯಪುರ, ಜು.28: ವಿಷಜಂತು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ಬಂದ ಯುವಕನೋರ್ವನಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿ ಅವರ ಸಾವಿಗೆ ಕಾರಣವಾದ ಆರೋಪದಲ್ಲಿ ಕಲಕೇರಿ ಸಮುದಾಯ ಆಸ್ಪತ್ರೆಯ ವೈದ್ಯರೊಬ್ಬರ ಸಹಿತ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ ಆದೇಶಿಸಿದ್ದಾರೆ.
ಡಾ.ರುಕ್ಸಾನಾ ಬೇಗಂ, ನರ್ಸ್ ಲಕ್ಷ್ಮೀ ಪಾಟೀಲ್, ಫಾರ್ಮಸಿ ಅಧಿಕಾರಿ ಎನ್.ಬಿ.ಪಾಟೀಲ್ ಹಾಗೂ ಡಿ ದರ್ಜೆ ನೌಕರ ಮಡಿವಾಳ ಅಖಂಡಳ್ಳಿ ಅಮಾನತುಗೊಂಡವರಾಗಿದ್ದಾರೆ.
ದೇವರಹಿಪ್ಪರಗಿ ತಾಲೂಕಿನ ತಿಳಗೂಳದ ಯುವಕ ಕಾಳಪ್ಪ ಎಂಬವರಿಗೆ ಸೋಮವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿತ್ತು. ಅವರನ್ನು ಚಿಕಿತ್ಸೆಗಾಗಿ ಸಿಂಧಗಿ ತಾಲೂಕಿನ ಕಲಕೇರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಕೊರೋನ ಭೀತಿಯ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದರು. ಚಿಕಿತ್ಸೆ ವಿಳಂಬವಾಗಿ ಕಾಳಪ್ಪಬಳಿಕ ಸಾವನ್ನಪ್ಪಿದ್ದು, ಇದಕ್ಕೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿ ಮೃತರ ಕುಟುಂಬಸ್ಥರು ಆಸ್ಪತ್ರೆಯೆದುರು ಧರಣಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ವೈದ್ಯ ಸಹಿತ ನಾಲ್ವರು ಸಿಬ್ಬಂದಿಯ ವಿರುದ್ಧ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.







